ಅಮೆರಿಕಾ ಮತ್ತು ಅದರ ಮಿತ್ರಕೂಟಗಳು ಲಿಬಿಯಾ ಮೇಲೆ ಭಾರೀ ಪ್ರಮಾಣದ ವಾಯುದಾಳಿ ಮತ್ತು ಕ್ಷಿಪಣಿ ದಾಳಿ ನಡೆಸುತ್ತಿರುವುದಕ್ಕೆ ಪ್ರತಿಕ್ರಿಯಿಸಿರುವ ಲಿಬಿಯನ್ ನಾಯಕ ಮುಅಮ್ಮರ್ ಗಡಾಫಿ, 'ಸುದೀರ್ಘ ಯುದ್ಧ'ದ ಭರವಸೆ ನೀಡಿದ್ದಾರೆ.
ಲಿಬಿಯಾದ ರಾಷ್ಟ್ರೀಯ ವಾಹಿನಿಗೆ ದೂರವಾಣಿ ಕರೆ ಮಾಡಿದ ಗಡಾಫಿ, ದೇಶದ ಪೂರ್ವ ಭಾಗದಲ್ಲಿ ಬಂಡಾಯ ಎದ್ದಿರುವವರನ್ನು ಬಿಡುವುದಿಲ್ಲ ಎಂದರು.
ಲಿಬಿಯನ್ನರಿಗಾಗಿ ಶಸ್ತ್ರಾಸ್ತ್ರ ಗೋದಾಮುಗಳನ್ನು ತೆರೆಯಲಾಗಿದೆ. ಪ್ರತಿಯೊಬ್ಬರೂ ಸ್ವಯಂಚಾಲಿತ ಶಸ್ತ್ರಾಸ್ತ್ರಗಳು, ಮೋರ್ಟಾರುಗಳು ಮತ್ತು ಬಾಂಬುಗಳನ್ನು ಹೊಂದಿದ್ದಾರೆ. ಸುದೀರ್ಘ ಯುದ್ಧವೊಂದರ ಭರವಸೆಯನ್ನು ನಾವು ನಿಮಗೆ (ವಿದೇಶಿ ಪಡೆಗಳಿಗೆ) ನೀಡುತ್ತೇವೆ ಎಂದು ತಿಳಿಸಿದರು.
ಪ್ರತಿಭಟನಾಕಾರರ ವಿರುದ್ಧ ದಾಳಿ ನಡೆಸುತ್ತಿರುವ ಗಡಾಫಿ ಪಡೆಗಳನ್ನು ತಡೆಯಲು, ವಿಶ್ವಸಂಸ್ಥೆಯ ಹಾರಾಟ ನಿಷೇಧ ವಲಯ ಆದೇಶವನ್ನು ಜಾರಿಗೆ ತರುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಪಡೆಗಳು ಲಿಬಿಯಾದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಗಡಾಫಿ ಪಡೆಗಳ ಕಾರ್ಯಾಚರಣೆಯನ್ನು ವಿಫಲಗೊಳಿಸುವುದು, ಸೇನಾ ನೆಲೆಗಳಿಗೆ ದಾಳಿ ನಡೆಸುವ ಮೂಲಕ ನಾಗರಿಕರನ್ನು ರಕ್ಷಿಸುವುದು ಅಮೆರಿಕಾ ಮತ್ತು ಯೂರೋಪಿಯನ್ ಪಡೆಗಳ ಉದ್ದೇಶ.
ಆದರೆ ಅಂತಾರಾಷ್ಟ್ರೀಯ ಮಿಲಿಟರಿಗಳಿಗೆ ಅಷ್ಟು ಸುಲಭದಲ್ಲಿ ಗಡಾಫಿ ಮಣಿಯುತ್ತಿರುವಂತೆ ಕಂಡು ಬರುತ್ತಿಲ್ಲ. ಇದನ್ನು 'ಧಾರ್ಮಿಕ ದಬ್ಬಾಳಿಕೆ' ಎಂದೇ ಕರೆದಿರುವ ಗಡಾಫಿ, ತನ್ನ ರಾಷ್ಟ್ರವನ್ನು ರಕ್ಷಿಸಲು ಪಣ ತೊಟ್ಟಿದ್ದೇನೆ ಎಂದು ಪ್ರಕಟಿಸಿದ್ದಾರೆ.
ಅಲ್ಲದೆ, ಮೆಡಿಟರೇನಿಯನ್ ಮತ್ತು ಉತ್ತರ ಆಫ್ರಿಕಾ ಪ್ರಾಂತ್ಯ ಹಾಗೂ ನಾಗರಿಕರನ್ನು ಅಪಾಯಕ್ಕೆ ತಳ್ಳುವ ಕಾರ್ಯ ಅಂತಾರಾಷ್ಟ್ರೀಯ ಪಡೆಗಳ ಪಾಲ್ಗೊಳ್ಳುವಿಕೆಯಿಂದ ನಡೆಯಲಿದೆ ಎಂದೂ ಎಚ್ಚರಿಕೆ ನೀಡಿದ್ದಾರೆ.
ಅದೇ ಹೊತ್ತಿಗೆ ಅತ್ತ ಹೇಳಿಕೆ ನೀಡಿರುವ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ, ಮಿಲಿಟರಿ ಕ್ರಮ ನನ್ನ ಮೊದಲ ಆಯ್ಕೆಯಲ್ಲ ಮತ್ತು ಅಮೆರಿಕಾದ ಭೂ ಸೇನೆಯನ್ನು ತಾನು ಕಾರ್ಯಾಚರಣೆಗೆ ಕಳುಹಿಸುವುದಿಲ್ಲ ಎಂದಿದ್ದಾರೆ.
ಅಂತಾರಾಷ್ಟ್ರೀಯ ಪಡೆಗಳು ನಡೆಸುತ್ತಿರುವ ವಾಯು ಮತ್ತು ಕ್ಷಿಪಣಿ ದಾಳಿಯಿಂದ ಒಟ್ಟಾರೆ ಬಲಿಯಾದವರ ಸಂಖ್ಯೆ ಖಚಿತವಾಗಿ ತಿಳಿದಿಲ್ಲ. ಲಿಬಿಯಾ ರಾಷ್ಟ್ರೀಯ ವಾಹಿನಿಯ ಪ್ರಕಾರ 48 ಮಂದಿ ಬಲಿಯಾಗಿದ್ದಾರೆ.