ಯೆಮೆನ್ ಪ್ರತಿಭಟನೆ ಕಿಚ್ಚು; ಅಲಿ ಪದತ್ಯಾಗಕ್ಕೆ ಜನರ ಪಟ್ಟು
ಯೆಮೆನ್, ಮಂಗಳವಾರ, 22 ಮಾರ್ಚ್ 2011( 15:50 IST )
ಯೆಮೆನ್ ಸರ್ವಾಧಿಕಾರಿ ಅಧ್ಯಕ್ಷ ಅಲಿ ಅಬ್ದುಲ್ಲಾ ಸಾಲೆಹ್ ಆಡಳಿತವನ್ನು ಅಂತ್ಯಗೊಳಿಸಬೇಕೆಂದು ವಿರೋಧ ಪಕ್ಷಗಳ ನೀಡಿರುವ ಕರೆಯ ಹಿನ್ನೆಲೆಯಲ್ಲಿ ಯೆಮೆನ್ ಆರ್ಮಿ ಜನರಲ್ ಸೇರಿದಂತೆ ಮೂರು ಮಂದಿ ಕಮಾಂಡರ್ ತಮ್ಮ ಸ್ಥಾನಕ್ಕೆ ಗುಡ್ ಬೈ ಹೇಳಿದ್ದಾರೆ. ಅಲ್ಲದೆ, ಅಲಿ ವಿರುದ್ಧ ನಡೆಯುತ್ತಿರುವ ಬೃಹತ್ ಪ್ರತಿಭಟನೆಗೆ ಆರ್ಮಿ ಟ್ಯಾಂಕ್ ಮತ್ತು ವಾಹನಗಳು ಆಗಮಿಸುವ ಮೂಲಕ ಬೆಂಬಲ ಸೂಚಿಸಿವೆ.
20 ವರ್ಷಕ್ಕಿಂತಲೂ ಅಧಿಕ ಕಾಲ ಅಧ್ಯಕ್ಷಗಾದಿಯಲ್ಲಿರುವ ಅಲಿ ಕೂಡಲೇ ಗದ್ದುಗೆಯಿಂದ ಕೆಳಗಿಳಿಯಬೇಕೆಂದು ಒತ್ತಾಯಿಸಿ ಸಾವಿರಾರು ಮಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಏತನ್ಮಧ್ಯೆ ಅಲಿ ವಿರುದ್ಧ ಕ್ಯಾಬಿನೆಟ್‌ನಲ್ಲಿರುವ ಎಲ್ಲ ಸಚಿವರು ಸಾಮೂಹಿಕ ರಾಜೀನಾಮೆ ನೀಡುವ ಬಗ್ಗೆಯೂ ಯೋಚಿಸಲಾಗುತ್ತಿದೆ ಎಂದು ಸರಕಾರದ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಅಲಿ ಅಧಿಕಾರದ ಗದ್ದುಗೆಯಿಂದ ಕೆಳಗಿಳಿಯಬೇಕೆಂದು ಆಗ್ರಹಿಸಿ ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿದ್ದು, ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ.
ಆರ್ಮಿ ಜನರಲ್ ಹಾಗೂ ಇಬ್ಬರು ಕಮಾಂಡರ್‌ಗಳಾದ ಮೊಹಮ್ಮದ್ ಅಲಿ ಮೊಶೆನ್ ಮತ್ತು ಹಮೀದ್ ಅಲ್ ಖ್ವಾಸಿಬಿ ತಮ್ಮ ಸ್ಥಾನವನ್ನು ತ್ಯಜಿಸಿದ್ದಾರೆ. ಅದೇ ರೀತಿ ಜೋರ್ಡಾನ್‌ನಲ್ಲಿರುವ ಯೆಮೆನ್ ರಾಯಭಾರಿ, ಸಂಸತ್ ಉಪ ಸ್ಪೀಕರ್ ಕೂಡ ತಾವು ಪ್ರತಿಭಟನಾಕಾರರಿಗೆ ಬೆಂಬಲ ನೀಡುವುದಾಗಿ ಸೋಮವಾರ ಘೋಷಿಸಿದ್ದರು.