ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದಿರುವ ಯೆಮೆನ್ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೆ, 2011ರ ಅಂತ್ಯದ ವೇಳೆಗೆ ಅಧ್ಯಕ್ಷಗಾದಿಯಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ದೇಶದ ಅಧಿಕಾರವನ್ನು ಮಿಲಿಟರಿ ಕಮಾಂಡರ್ ಕೈಗೊಪ್ಪಿಸುವುದಿಲ್ಲ ಎಂದು ಶಪಥ ಮಾಡಿದ್ದಾರೆ.
ಮಿಲಿಟರಿ ಪಡೆ ವಿರೋಧ ಪಕ್ಷದ ಜತೆ ಕೈಜೋಡಿಸಿರುವ ಹಿನ್ನೆಲೆಯಲ್ಲಿ ಅಲಿ ಈ ನಿರ್ಧಾರ ಪ್ರಕಟಿಸಿರುವುದಾಗಿ ವಕ್ತಾರರು ತಿಳಿಸಿದ್ದಾರೆ. ಆದರೆ ಈ ಬಗ್ಗೆ ವಿರೋಧ ಪಕ್ಷ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಯೆಮೆನ್ ಸರ್ವಾಧಿಕಾರಿ ವಿರುದ್ಧ ಜನರು ತೀವ್ರ ಪ್ರತಿಭಟನೆ ನಡೆಸಿ, ಅಧಿಕಾರದ ಗದ್ದುಗೆಯಿಂದ ಕೆಳಗಿಳಿಯುವಂತೆ ಒತ್ತಾಯಿಸಿದ್ದರು. ಈ ಸಂದರ್ಭದಲ್ಲಿ ಬುಡಕಟ್ಟು ಮುಖಂಡರು, ಪ್ರಭಾವಿ ಆರ್ಮಿ ಕಮಾಂಡರ್‌ಗಳು ಕೂಡ ಪ್ರತಿಭಟನಾಕಾರರಿಗೆ ಸಾಥ್ ನೀಡಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು.
ಆ ನಿಟ್ಟಿನಲ್ಲಿ ಕೂಡಲೇ ಅಧ್ಯಕ್ಷಗಾದಿಯಿಂದ ಕೆಳಗಿಳಿಯಬೇಕು ಎಂಬ ವಿರೋಧಿಗಳ ಬೇಡಿಕೆಯನ್ನು ಸಾರಸಗಟಾಗಿ ತಳ್ಳಿಹಾಕಿರುವ ಅಲಿ, ವರ್ಷಾಂತ್ಯದ ವೇಳೆಗೆ ರಾಜೀನಾಮೆ ನೀಡುವುದಾಗಿ ಸ್ಪಷ್ಟಪಡಿಸಿರುವುದಾಗಿ ಅಧ್ಯಕ್ಷರ ಭವನದ ವಕ್ತಾರ ಅಹ್ಮದ್ ಅಲ್ ಸೂಫಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಅಲಿ ಅವರು ಸೋಮವಾರ ರಾತ್ರಿ ಯೆಮೆನ್‌ನ ಹಿರಿಯ ಅಧಿಕಾರಿಗಳು, ಮಿಲಿಟರಿ ಕಮಾಂಡರ್ ಹಾಗೂ ಬುಡಕಟ್ಟು ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಯಾವುದೇ ಕಾರಣಕ್ಕೂ ತಾನು ಅಧಿಕಾರವನ್ನು ಮಿಲಿಟರಿ ಕೈಗೆ ಒಪ್ಪಿಸುವುದಿಲ್ಲ ಎಂಬ ಅಂಶವನ್ನು ಅವರು ಸ್ಪಷ್ಟಪಡಿಸಿರುವುದಾಗಿ ಸೂಫಿ ವಿವರಿಸಿದ್ದಾರೆ.
ಮಿಲಿಟರಿ ಕಮಾಂಡರ್‌ಗಳು ವಿಶ್ವಾಸ ದ್ರೋಹ ಎಸಗಿದ್ದಾರೆ. ಅದರಲ್ಲೂ ಜನರಲ್ ಅಲಿ ಮೋಶೆನ್ ಅಲ್ ಅಹ್ಮರ್ ಅವರೊಬ್ಬ ಬಂಡುಕೋರ ಹಾಗೂ ಕ್ಷಿಪ್ರ ಕ್ರಾಂತಿ ಸಂವಿಧಾನ ವಿರೋಧಿಯಾದದ್ದು ಎಂದು ಆಕ್ರೋಶ ವ್ಯಕ್ತಪಡಿಸಿರುವುದಾಗಿ ತಿಳಿಸಿದರು.