ಭಾರತ-ಪಾಕ್ ಸಮಸ್ಯೆ ಇತ್ಯರ್ಥಕ್ಕೆ ಯುದ್ಧ ಪರಿಹಾರವಲ್ಲ: ಗಿಲಾನಿ
ಇಸ್ಲಾಮಾಬಾದ್, ಗುರುವಾರ, 24 ಮಾರ್ಚ್ 2011( 16:03 IST )
ಭಾರತದ ಜತೆಗಿನ ಎಲ್ಲಾ ವಿವಾದಗಳನ್ನು ಸೌಹಾರ್ದಯುತವಾಗಿಯೇ ಬಗೆಹರಿಸಿಕೊಳ್ಳಬೇಕೆಂಬುದು ಪಾಕಿಸ್ತಾನದ ಇಚ್ಛೆಯಾಗಿದೆ. ಬಾಕಿ ಉಳಿದಿರುವ ಎಲ್ಲಾ ಸಮಸ್ಯೆಗಳನ್ನು ಮಾತುಕತೆ ಮೂಲಕವೇ ಇತ್ಯರ್ಥಗೊಳಿಸಿಕೊಳ್ಳಬೇಕೆ ವಿನಃ ಯುದ್ಧದಿಂದ ಅಲ್ಲ ಎಂದು ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
'ಸಮಸ್ಯೆಗಳ ಇತ್ಯರ್ಥಕ್ಕೆ ಯುದ್ಧ ಪರಿಹಾರವಲ್ಲ, ಭಾರತ ಮತ್ತು ಪಾಕಿಸ್ತಾನ ನಡುವೆ ಮಾತುಕತೆ ಮೂಲಕ ಮಾತ್ರವೇ ವಿವಾದ ಬಗೆಹರಿಸಿಕೊಳ್ಳಬೇಕಾಗಿದೆ' ಎಂದು ಗಿಲಾನಿ ತಿಳಿಸಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.
ಭಾರತದ ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ನೇತೃತ್ವದ ಶಾಂತಿ ನಿಯೋಗ ಇಸ್ಲಾಮಾಬಾದ್‌ನಲ್ಲಿರುವ ಪ್ರಧಾನಿ ಗಿಲಾನಿ ಗೃಹಕಚೇರಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಈ ಅಭಿಪ್ರಾಯ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.
ಶಾಂತಿ, ಸೌಹಾರ್ದತೆ, ಅಭಿವೃದ್ಧಿಗೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ಕೊಡುಗೆ ಶ್ಲಾಘನೀಯವಾದದ್ದು ಎಂದು ಸಂತಸ ವ್ಯಕ್ತಪಡಿಸಿದ ಗಿಲಾನಿ, ನೆರೆಯ ಭಾರತದ ಜತೆ ಶಾಂತಿಯುತವಾಗಿ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳುವ ಬಯಕೆ ತಮ್ಮದಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.