ಭೂಕಂಪ ಹಾಗೂ ಸುನಾಮಿಯಿಂದ ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸಿರುವ ಜಪಾನ್ ಆರ್ಥಿಕವಾಗಿ ಬೃಹತ್ ಮೊತ್ತದ ಹೊಡೆತ ಕಂಡಿದೆ. ಆದರೂ ಭೂಕಂಪದಿಂದ ಕಂದಕದಂತಾಗಿದ್ದ ರಸ್ತೆಯೊಂದನ್ನು ಕೇವಲ ಆರು ದಿನಗಳಲ್ಲಿಯೇ ಪುನರ್ ರಚಿಸಿ ಸಂಚಾರಕ್ಕೆ ಅನುವು ಮಾಡಿಕೊಡುವ ಮೂಲಕ ಹುಬ್ಬೇರಿಸುವಂತೆ ಮಾಡಿದೆ.
ಮಾರ್ಚ್ 11ರಂದು ಭೂಕಂಪದಿಂದ ಸಾವಿರಾರು ಕಟ್ಟಡ, ಕಾರುಗಳು ಸುನಾಮಿಯ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದವು. ಆ ಸಂದರ್ಭದಲ್ಲೇ ಗ್ರೇಟ್ ಕಾನ್ಟೋ ಹೈವೇ ಕಂದಕದಂತೆ ಬಾಯ್ದೆದು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಏತನ್ಮಧ್ಯೆ ಮಾರ್ಚ್ 17ರಂದು ರಸ್ತೆಯ ಪುನರ್ ನಿರ್ಮಾಣ ಕಾರ್ಯ ಆರಂಭಿಸಿ ಆರು ದಿನಗಳಲ್ಲಿಯೇ ಪೂರ್ಣಗೊಳಿಸಿರುವುದಾಗಿ ವರದಿ ವಿವರಿಸಿದೆ.
ಸುನಾಮಿ, ಭೂಕಂಪದಿಂದ ಜಪಾನ್ ಜನರು ಕಂಗೆಟ್ಟು ಹೋಗಿದ್ದರೂ ಕೂಡ, ಇದೀಗ ಹಲವು ಉದ್ಯೋಗಿಗಳು ತಮ್ಮ ಕಚೇರಿಗಳಿಗೆ ವಾಪಸಾಗಿದ್ದಾರೆ. ಅದೇ ರೀತಿ ವ್ಯವಹಾರಗಳು ಆರಂಭಗೊಂಡಿವೆ. ಮತ್ತೊಂದೆಡೆ ಫುಕುಶಿಮಾ ಡೈಚಿ ಪರಮಾಣು ಘಟಕದಲ್ಲಿ ಸ್ಫೋಟ ಸಂಭವಿಸಿದ್ದರ ಪರಿಣಾಮ ವಿಕಿರಣಗಳು ಸೋರುವಿಕೆ ಪ್ರಮಾಣ ಹೆಚ್ಚಾಗುತ್ತಿರುವುದು ದೊಡ್ಡ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಇದೀಗ ವಿಕಿರಣ ಸೋರಿಕೆ ತಡೆಗಟ್ಟಲು ತಜ್ಞರು ಹರಸಾಹಸ ಪಡುತ್ತಿದ್ದಾರೆ. ಏತನ್ಮಧ್ಯೆ ಟೋಕಿಯೋದಲ್ಲಿನ ನಳ್ಳಿ ನೀರು, ಫುಕುಶಿಮಾ ಜಿಲ್ಲೆಯ ಹಾಲು ಖರೀದಿಯನ್ನು ನಿಲ್ಲಿಸಿದ್ದಾರೆ. ಆದರೂ ಭಾರೀ ಭೂಕಂಪಕಕ್ಕೆ ಕಂದಕವಾಗಿದ್ದ ರಸ್ತೆಯನ್ನು ಆರು ದಿನದೊಳಗೆ ರಿಪೇರಿ ಮಾಡಿರುವುದು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಅದೇ ಸ್ಥಿತಿ ಭಾರತದಲ್ಲಿ ಆಗಿದ್ದರೆ ಆರು ದಿನದೊಳಗೆ ಸಾಧ್ಯವಾಗುತ್ತಿತ್ತೇ ಎಂಬುದು ಯಕ್ಷ ಪ್ರಶ್ನೆ!