ಇಸ್ಲಾಮಾಬಾದ್, ಶುಕ್ರವಾರ, 25 ಮಾರ್ಚ್ 2011( 09:20 IST )
ಪ್ರಸಕ್ತವಾಗಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾಟದ ವೇಳೆ ಭಯೋತ್ಪಾದನಾ ದಾಳಿ ನಡೆಸಲು ಸಂಚು ನಡೆಸಿರುವ ಆರೋಪಿಗಳನ್ನು ಸೆರೆ ಹಿಡಿದಿರುವುದಾಗಿ ಪಾಕಿಸ್ತಾನದ ಆಂತರಿಕ ಸಚಿವ ರೆಹಮಾನ್ ಮಲಿಕ್ ತಿಳಿಸಿದ್ದಾರೆ.
ಬಂಧಿತರು ವಿಶ್ವಕಪ್ ಟೂರ್ನ್‌ಮೆಂಟ್ ಮೇಲೆ ಗಂಭೀರ ಪ್ರಮಾಣದ ದಾಳಿ ಮಾಡಲು ಸಂಚು ರೂಪಿಸಿರುವುದಾಗಿ ಆರೋಪಿಸಿರುವ ಮಲಿಕ್, ಸೆರೆ ಹಿಡಿದ ವ್ಯಕ್ತಿಗಳು ಯಾವ ದೇಶಕ್ಕೆ ಸೇರಿದವರು ಹಾಗೂ ಅವರ ಹೆಸರು, ಮಾಹಿತಿಯನ್ನು ಮಾತ್ರ ಬಹಿರಂಗಪಡಿಸಿಲ್ಲ.
ಗುರುವಾರ ಇಂಟರ್‌ಪೋಲ್ ವರಿಷ್ಠ ರೋನಾಲ್ಡ್ ನೊಬೆಲ್ ಜತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,ವಿಶ್ವಕಪ್ ಕ್ರಿಕೆಟ್ ಟೂರ್ನ್‌ಮೆಂಟ್ ಮೇಲೆ ರೂಪಿಸಿರುವ ಸಂಚಿನ ಆರೋಪಿಗಳನ್ನು ಅಂತಾರಾಷ್ಟ್ರೀಯ ಪೊಲೀಸ್ ಸಂಸ್ಥೆಯ ನೆರವಿನಿಂದ ಸೆರೆ ಹಿಡಿಯಲಾಗಿದೆ ಎಂದು ಹೇಳಿದರು.
ಸಂಭಾವ್ಯ ದಾಳಿ ಕುರಿತಂತೆ ಭಾರತಕ್ಕೂ ಮಾಹಿತಿ ರವಾನಿಸಲಾಗಿತ್ತು ಎಂದ ಅವರು, ತಾಲಿಬಾನ್ ಉಗ್ರಗಾಮಿ ಸಂಘಟನೆ ಭಾರತದಲ್ಲಿ ವಿಧ್ವಂಸ ಕೃತ್ಯ ಎಸಗಲು ಮುಂದಾಗಿರುವುದಾಗಿ ಆರೋಪಿಸಿದರು.
ತಾಲಿಬಾನ್ ಭಯೋತ್ಪಾದಕ ಸಂಘಟನೆ ಈಗಾಗಲೇ ಭಾರತದಲ್ಲಿ ತನ್ನ ಕಾರ್ಯಚಟುವಟಿಕೆ ಆರಂಭಿಸಿದೆ. ಅಷ್ಟೇ ಅಲ್ಲ ದಾಳಿ ನಡೆಸುವ ಬಗ್ಗೆ ನೆರೆಯ ಭಾರತಕ್ಕೂ ಈ ಬಗ್ಗೆ ಎಚ್ಚರಿಕೆ ನೀಡಿತ್ತು ಎಂದು ಹೇಳಿದರು.
ಆ ನಿಟ್ಟಿನಲ್ಲಿ ಭಯೋತ್ಪಾದಕರಿಗೆ ಯಾವುದೇ ಗಡಿ ಅಥವಾ ಧರ್ಮದ ರೇಖೆಯಿಲ್ಲ. ಭಾರತದಲ್ಲಿಯೂ ತಾಲಿಬಾನ್ ಈಗಾಗಲೇ ತನ್ನ ಕರಾಳ ಮುಖವನ್ನು ತೋರಿಸಿದೆ ಎಂದು ತಿಳಿಸಿದರು.