ಮಿಲಿಟರಿ ಬಲ ಪ್ರಯೋಗಿಸಿ ಲಿಬಿಯಾ ಅಧ್ಯಕ್ಷ ಮೊಅಮ್ಮರ್ ಗಡಾಫಿಯನ್ನು ಹತ್ಯೆಗೈಯುವ ಉದ್ದೇಶ ಹೊಂದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಸ್ಪಷ್ಟಪಡಿಸಿರುವುದಾಗಿ ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತಂತೆ ತಮ್ಮ ಪಾತ್ರ ಏನೂ ಇಲ್ಲ ಎಂದು ಬರಾಕ್ ಅವರು ಹೌಸ್ ಇಂಟೆಲಿಜೆನ್ಸ್ ಕಮಿಟಿಯ ಸದಸ್ಯ ರುಪ್ರೆಸ್‌ಬೆರ್ಗರ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿರುವುದಾಗಿ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.
ಮೊಅಮ್ಮರ್ ಗಡಾಫಿ ಪದಚ್ಯುತಿ ಕುರಿತಂತೆ ಕೇವಲ ಮಿಲಿಟರಿ ಶಕ್ತಿ ಪ್ರಯೋಗ ಅಲ್ಲ ಎಂದು ಹೇಳಿರುವುದಾಗಿಯೂ ಮೂಲವೊಂದು ವಿವರಿಸಿದೆ. ಅದೇ ರೀತಿ ಬಂಡುಕೋರರ ಹಿಡಿತದಲ್ಲಿರುವ ನಗರಗಳಲ್ಲಿ ಗಡಾಫಿ ನೇತೃತ್ವದ ಪಡೆ ದಾಳಿ ನಡೆಸುತ್ತಿದ್ದು, ಅದನ್ನು ತಡೆಯಲು ಮಿತ್ರಪಡೆಗಳು ಪ್ರತಿದಾಳಿ ನಡೆಸುತ್ತಿವೆ.
ಅಷ್ಟೇ ಅಲ್ಲ ಲಿಬಿಯಾದ ಕ್ರಮದ ಬಗ್ಗೆ ಕಿಡಿಕಾರಿರುವ ವಿಶ್ವಸಂಸ್ಥೆ ಕೂಡ ಕಿಡಿಕಾರಿದೆ. ಆ ನಿಟ್ಟಿನಲ್ಲಿ ಅಮೆರಿಕ ನೇತೃತ್ವದ ಪಡೆ ಒಡೆಸ್ಸಿ ಡಾನ್ ಕಾರ್ಯಾಚರಣೆ ನಡೆಸುತ್ತಿದೆ. ಇದರಲ್ಲಿ ಅಮೆರಿಕ, ಬ್ರಿಟನ್, ಫ್ರಾನ್ಸ್ ಸೇರಿದಂತೆ 13 ದೇಶಗಳ ಮಿಲಿಟರಿ ಪಡೆ ಸೇರಿದೆ. ಏತನ್ಮಧ್ಯೆ, ಅಮೆರಿಕ ನೇತೃತ್ವದ ಮಿಲಿಟರಿ ಪಡೆ ದಾಳಿಯಲ್ಲಿ ಹಲವಾರು ನಾಗರಿಕರು ಸಾವನ್ನಪ್ಪಿರುವುದಾಗಿ ಲಿಬಿಯಾ ಸರಕಾರ ಆರೋಪಿಸಿದೆ.