ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ: ಅಪಹೃತ ಹಿಂದೂ ಗುರು ಕೊನೆಗೂ ಬಂಧಮುಕ್ತ (Abducted | Hindu spiritual leader | Balochistan | Pakistan | police | release)
ಪಾಕಿಸ್ತಾನ: ಅಪಹೃತ ಹಿಂದೂ ಗುರು ಕೊನೆಗೂ ಬಂಧಮುಕ್ತ
ಇಸ್ಲಾಮಾಬಾದ್, ಶನಿವಾರ, 26 ಮಾರ್ಚ್ 2011( 15:42 IST )
ಕಳೆದ ಮೂರು ತಿಂಗಳ ಹಿಂದೆ ಅಪಹೃತಗೊಂಡಿದ್ದ ಹಿರಿಯ ಹಿಂದೂ ಗುರುವನ್ನು ಪಾಕಿಸ್ತಾನದ ನೈರುತ್ಯ ಪ್ರದೇಶದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಶುಕ್ರವಾರ ಬಿಡುಗಡೆಗೊಳಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಡಿಸೆಂಬರ್ 21ರಂದು ಕಾಲಾಟ್ ಜಿಲ್ಲೆಯಿಂದ ಹಿಂದೂ ಗುರು ಮಹಾರಾಜಾ ಲುಕ್ಮಿ ಚಾಂದ್ ಗಾರ್ಜಿ (82) ಹಾಗೂ ಅವರ ನಾಲ್ವರು ಶಿಷ್ಯರನ್ನು ಗುಂಪೊಂದು ಅಪಹರಿಸಿತ್ತು. ಈ ಘಟನೆ ಖಂಡಿಸಿ ಅಲ್ಪಸಂಖ್ಯಾತ ಹಿಂದೂ ಸಮುದಾಯ ತೀವ್ರ ಪ್ರತಿಭಟನೆ ನಡೆಸಿ, ಗುರುವನ್ನು ಬಿಡುಗಡೆ ಮಾಡಿಸುವಂತೆ ಒತ್ತಡ ಹೇರಿದ್ದವು.
ಅಂತೂ ಅಪಹರಣಗೊಂಡ ಮೂರು ತಿಂಗಳ ಬಳಿಕ ಲುಕ್ಮಿ ಚಾಂದ್ ಅವರನ್ನು ಬಲೂಚಿಸ್ತಾನ್‌ನ ಸೋರಾಬ್ ಮತ್ತು ಖುಜ್ದಾರ್ ನಡುವಿನ ಪ್ರದೇಶದಲ್ಲಿ ಬಿಡುಗಡೆಗೊಳಿಸಿರುವುದಾಗಿ ಪೊಲೀಸರು ವಿವರಿಸಿದ್ದಾರೆ. ತದನಂತರ ನಾಲ್ವರು ಶಿಷ್ಯರನ್ನು ಬಿಡುಗಡೆಗೊಳಿಸಿದ್ದಾರೆ.
ಬಂಧಮುಕ್ತಗೊಂಡ ಹಿಂದೂ ಗುರು ಗಾರ್ಜಿ ಅವರು ತಮ್ಮ ನಿವಾಸಕ್ಕೆ ತಲುಪಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿರುವುದಾಗಿ ಎಪಿಪಿ ನ್ಯೂಸ್ ಏಜೆನ್ಸಿ ತಿಳಿಸಿದೆ. ಬುಡಕಟ್ಟು ಮುಖಂಡರ ಮಧ್ಯಸ್ಥಿಕೆಯಲ್ಲಿ ಒತ್ತೆಹಣವನ್ನು ಸಂದಾಯ ಮಾಡಿದ ನಂತರ ಗಾರ್ಜಿಯನ್ನು ಬಿಡುಗಡೆ ಮಾಡಲಾಗಿದೆಯೇ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ ಗಾರ್ಜಿ ಅವರನ್ನು ಬಿಡುಗಡೆ ಮಾಡಿರುವುದು ಖಚಿತ. ಆ ಬಗ್ಗೆ ಯಾವುದೇ ಹೆಚ್ಚಿನ ವಿವರ ಲಭ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.