ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ದಾಖಲೆ ಬರೆದ ಜೋಡಿ; ವರನಿಗೆ 100-ವಧುಗೆ 93! (oldest couple | 100-year-old man | 93-year-old woman | Rose Pollard | California)
ದಾಖಲೆ ಬರೆದ ಜೋಡಿ; ವರನಿಗೆ 100-ವಧುಗೆ 93!
ವಾಷಿಂಗ್ಟನ್, ಸೋಮವಾರ, 28 ಮಾರ್ಚ್ 2011( 14:49 IST )
PR
ಪ್ರೇಮಕ್ಕೆ ವಯಸ್ಸಿನ ಮಿತಿಯಿಲ್ಲ ಎಂಬುದಕ್ಕೆ ಇದು ಮತ್ತೊಂದು ತಾಜಾ ಉದಾಹರಣೆ...ಕ್ಯಾಲಿಫೋರ್ನಿಯಾದ ಡಾನಾ ಕಮ್ಯೂನಿಟಿ ಸೆಂಟರ್‌ನಲ್ಲಿ ಇಬ್ಬರು ಹಿರಿಯರು ಹಸೆಮಣೆ ಏರುವ ಮೂಲಕ ಹಿರಿಯ ವಯಸ್ಸಿನ ಜೋಡಿ ಎಂಬ ದಾಖಲೆ ಬರೆದಿದ್ದಾರೆ. ಅಂದ ಹಾಗೆ ವರನ ವಯಸ್ಸು 100, ವಧುವಿನ ವಯಸ್ಸು 93!.
ಫಾರೆಸ್ಟ್ ಲನ್ಸ್‌ವೇ ಮತ್ತು ರೋಸ್ ಪೊಲಾರ್ಡ್ ಮಾರ್ಚ್ 19ರಂದು ವಿವಾಹವಾಗಿದ್ದು, ಅತ್ಯಂತ ಹಿರಿಯ ವಯಸ್ಸಿನಲ್ಲಿ ಮದುವೆಯಾದ ಜೋಡಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಹಾಗಂತ ಈ ಅಜ್ಜ-ಅಜ್ಜಿಯದ್ದು ದಿಢೀರ್ ಮದುವೆಯಲ್ಲ ಇದು. ಯಾಕೆಂದರೆ ಸುದೀರ್ಘ 30 ವರ್ಷಗಳ ಕಾಲ ಪ್ರೇಮಿಗಳಾಗಿದ್ದ ಫಾರೆಸ್ಟ್ ಮತ್ತು ರೋಸ್ ಅಂತಿಮವಾಗಿ ಮದುವೆಯಾಗೋ ನಿರ್ಧಾರಕ್ಕೆ ಬಂದಿದ್ದರು. 1983ರಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಇಬ್ಬರೂ ನೃತ್ಯ ಕಲಿಸಲು ಕ್ಯಾಲಿಫೋರ್ನಿಯಾಕ್ಕೆ ಬಂದಿದ್ದರು. ಮೊದಲ ಪರಿಚಯವೇ ಸ್ನೇಹವಾಗಿ ನಂತರ ಪ್ರೇಮಕ್ಕೆ ತಿರುಗಿತ್ತು ಎಂದು ಮಾಧ್ಯಮದ ವರದಿ ತಿಳಿಸಿದೆ.
ಪ್ರೇಮಿಗಳಾಗಿದ್ದ ಇಬ್ಬರಲ್ಲೂ ಮದುವೆಯಾಗೋ ಬಗ್ಗೆ ಗೊಂದಲ ಇತ್ತಂತೆ. ಫಾರೆಸ್ಟ್ ಮದುವೆ ಪ್ರಸ್ತಾಪ ಮುಂದಿಟ್ಟಾಗ ಅಜ್ಜಿ ಆತನ ಬೇಡಿಕೆಯನ್ನು ತಿರಸ್ಕರಿಸಿದ್ದಳಂತೆ. ಕೊನೆಗೂ ಫಾರೆಸ್ಟ್ ಅವರ 100ನೇ ಹುಟ್ಟು ಹಬ್ಬದಂದೇ ರೋಸ್ ಮದುವೆಯಾಗುವುದಾಗಿ ರೋಸ್ ವಾಗ್ದಾನ ನೀಡಿದ್ದಳಂತೆ. ಅದೇ ರೀತಿಯಲ್ಲಿ 100ನೇ ಹುಟ್ಟಹಬ್ಬದಂದೇ ವಿವಾಹವಾಗಿದ್ದರು.
ಫಾರೆಸ್ಟ್ ಲನ್ಸ್‌ವೇ ಮತ್ತು ರೋಸ್ ಪೊಲಾರ್ಡ್ ವಿವಾಹ ಜಗತ್ತಿನ ಹಿರಿಯ ಜೋಡಿ ಎಂಬ ದಾಖಲೆಗೆ ಸೇರಿದೆ. ಈ ಮೊದಲು ಇಂಗ್ಲೆಂಡ್‌ನ ಹ್ಯಾರಿ ಕೊರ್ಟೊನ್ (100) ಎಡ್ನಾ ಹೋಲ್‌ಫೋರ್ಡ್ (83) ವಿವಾಹವಾಗಿದ್ದರು. ಇವರ ಹೆಸರಲ್ಲಿ ಇದ್ದ ದಾಖಲೆ ಇದೀಗ ಮುರಿದಂತಾಗಿದೆ.