ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ 2002ರಲ್ಲಿ ಸಂಭವಿಸಿದ ಬಾಂಬ್ ಬ್ಲಾಸ್ ಪ್ರಕರಣದ ಮಾಸ್ಟರ್ ಮೈಂಡ್ ಅನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ ಎಂದು ಇಂಡೇನೇಷ್ಯಾದ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಬಾಲಿ ಬಾಂಬ್ ಸ್ಫೋಟದಲ್ಲಿ 200 ಮಂದಿ ಸಾವನ್ನಪ್ಪಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಉಮರ್ ಪಾಟೆಕ್ ಎಂಬಾತನನ್ನು ಮಂಗಳವಾರ ಸೆರೆ ಹಿಡಿಯಲಾಗಿದೆ ಎಂದು ಅಧಿಕಾರಿಗಳು ಎಎಫ್‌ಪಿಗೆ ವಿವರಿಸಿದ್ದಾರೆ. ಆದರೆ ಆತನನ್ನು ಎಲ್ಲಿ ಮತ್ತು ಹೇಗೆ ಬಂಧಿಸಲಾಯಿತು ಎಂಬ ವಿವರ ನೀಡಲು ನಿರಾಕರಿಸಿದ್ದಾರೆ.
ಈ ಬಗ್ಗೆ ಪಾಕಿಸ್ತಾನದ ಅಧಿಕಾರಿಗಳು ಕೂಡ ಖಚಿತಪಡಿಸಿಲ್ಲ. ಪ್ರಮುಖ ಆರೋಪಿಯ ಬಂಧನದ ಮಾಹಿತಿ ಪಡೆದಿದ್ದು, ಪೊಲೀಸ್ ಹಾಗೂ ಭಯೋತ್ಪಾದನಾ ನಿಗ್ರಹ ಅಧಿಕಾರಿಗಳ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗಿದೆ ಎಂಬುದಾಗಿ ಇಂಡೋನೇಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಿ ಬ್ಲಾಸ್ಟ್ ಮಾಸ್ಟರ್ ಮೈಂಡ್ ಉಮರ್ ಪಾಟೆಕ್ ಬಂಧನದ ಮಾಹಿತಿಯನ್ನು ನಮ್ಮ ಗುಪ್ತಚರ ತಂಡ ಪಾಕ್ ಅಧಿಕಾರಿಗಳನ್ನು ಸಂಪರ್ಕಿಸಿ ಖಚಿತಪಡಿಸಿಕೊಂಡಿದೆ ಎಂದು ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಏಜೆನ್ಸಿ ವರಿಷ್ಠ ಅನ್ಸಾಯಾದ್ ಮಾಬೈ ಸ್ಪಷ್ಟಪಡಿಸಿದ್ದಾರೆ.