ಪಾಕಿಸ್ತಾನದ ಜಮಾತ್ ಉಲೇಮಾ ಇಸ್ಲಾಮ್ ವರಿಷ್ಠ ಫಾಜ್ಲುರ್ ರೆಹ್ಮಾನ್ (57) ಅವರು ಗುರುವಾರ ಎರಡನೇ ಬಾರಿ ನಡೆದ ಆತ್ಮಹತ್ಯಾ ಬಾಂಬರ್ ದಾಳಿಯಿಂದ ಅದೃಷ್ಟವಶಾತ್ ಪಾರಾಗಿರುವ ಘಟನೆ ನಡೆದಿದ್ದು, ದಾಳಿಯಲ್ಲಿ 10 ಮಂದಿ ಸಾವನ್ನಪ್ಪಿದ್ದು, 29 ಜನರು ಗಾಯಗೊಂಡಿದ್ದಾರೆ.
ಪಾಕಿಸ್ತಾನದ ವಾಯುವ್ಯ ಪ್ರದೇಶದಲ್ಲಿ ರೆಹ್ಮಾನ್ ಆಗಮಿಸುತ್ತಿದ್ದ ವಾಹನವನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಲಾಗಿದೆ. ಬುಧವಾರ ಕೂಡ ರೆಹ್ಮಾನ್ ಅವರ ವಾಹನ ಗುರಿಯಾಗಿರಿಸಿ ಆತ್ಮಹತ್ಯಾ ಬಾಂಬರ್ ದಾಳಿ ನಡೆಸಿದ್ದ. ಆದರೆ ರೆಹ್ಮಾನ್ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದರು.
ಖೈಬೆರ್ ಪಾಖ್ತುನ್‌ಖಾವಾ ಪ್ರಾಂತ್ಯದ ಚಾರ್ಸಾಡಾ ನಗರದಲ್ಲಿ ದಾರೂಲ್ ಉಲೂಮ್ ಇಸ್ಲಾಮಿಯಾದ ಸೆಮಿನಾರನಲ್ಲಿ ಮಾತನಾಡಲು ಆಗಮಿಸುತ್ತಿದ್ದ ವೇಳೆಯಲ್ಲಿ ಆತ್ಮಹತ್ಯಾ ಬಾಂಬರ್ ದಾಳಿ ನಡೆಸಿದ್ದ. ಇದು ಪ್ರಬಲ ಸ್ಫೋಟ ಎಂದು ಸರಕಾರಿ ಮತ್ತು ಖಾಸಗಿ ಶಾಲೆಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ದಾಳಿಯಲ್ಲಿ ನಾಲ್ವರು ಪೊಲೀಸರು, ಮಹಿಳೆಯರು ಸೇರಿದಂತೆ ಹತ್ತು ಮಂದಿ ಬಲಿಯಾಗಿದ್ದಾರೆ. 29 ಜನರು ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ನಾನು ಅಪಾಯದಿಂದ ಪಾರಾಗಿದ್ದೇನೆ. ತನ್ನ ಬೆಂಗಾವಲು ಪಡೆಯ ಕಾರು ಸ್ವಲ್ಪ ಜಖಂಗೊಂಡಿರುವುದಾಗಿ ಘಟನೆ ನಂತರ ರೆಹ್ಮಾನ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.