ಲಿಬಿಯಾದ ಸರ್ವಾಧಿಕಾರಿ ಮೊಅಮ್ಮರ್ ಗಡಾಫಿಯನ್ನು ದೇಶದ ಜನರೇ ಅಧಿಕಾರದಿಂದ ಕೆಳಗಿಳಿಸುತ್ತಾರೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ರೋಬರ್ಟ್ ಗೇಟ್ಸ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಕಳೆದ 41 ವರ್ಷಗಳಿಂದ ತೈಲಸಂಪದ್ಭರಿತ ಲಿಬಿಯಾವನ್ನು ಆಳುತ್ತಿರುವ ಸರ್ವಾಧಿಕಾರಿ ಗಡಾಫಿ ವಿರುದ್ಧ ಜನರೇ ದಂಗೆ ಎದ್ದಿದ್ದಾರೆ. ಏತನ್ಮಧ್ಯೆ ಅಮೆರಿಕ ಹಾಗೂ ಮಿತ್ರ ಪಡೆಗಳು ಬಂಡುಕೋರರಿಗೆ ಬೆಂಬಲ ಸೂಚಿಸಿ ದಾಳಿ ನಡೆಸುತ್ತಿರುವುದಾಗಿ ಹೇಳಿದರು.
ನನ್ನ ದೃಷ್ಟಿಕೋನದಲ್ಲಿ ಸೂಕ್ತ ಸಮಯದಲ್ಲೇ ರಾಜಕೀಯ ಹಾಗೂ ಆರ್ಥಿಕ ಹಿನ್ನಲೆಯಲ್ಲಿ ಲಿಬಿಯಾದ ಜನರೇ ಗಡಾಫಿಯನ್ನು ಅಧಿಕಾರದಿಂದ ಕಿತ್ತೊಗೆಯುತ್ತಾರೆ ಎಂದು ಸೆನೆಟ್ ಆರ್ಮ್‌ಡ್ ಸರ್ವಿಸ್ ಕಮಿಟಿ ಸಭೆಯಲ್ಲಿ ಮಾತನಾಡುತ್ತ ತಿಳಿಸಿದ್ದಾರೆ.
ಗಡಾಫಿ ನೇತೃತ್ವದ ಮಿಲಿಟರಿ ಪಡೆ ನ್ಯಾಟೋ ನೇತೃತ್ವದ ಕಾರ್ಯಾಚರಣೆಯ ಮಿಲಿಟರಿ ಪಡೆಯನ್ನು ಹೀನಾಯವಾಗಿ ಕಾಣುತ್ತಿದ್ದಾರೆ. ಅಲ್ಲದೇ ವಿದೇಶಿ ಮಿಲಿಟರಿ ಪಡೆಯೇ ತಮ್ಮ ದೇಶದಿಂದ ಕಾಲ್ತೆಗೆಯಬೇಕು ಎಂದು ಕಟ್ಟಪ್ಪಣೆ ಹೊರಡಿಸುವ ಮೂಲಕ ತಮ್ಮ ಸರ್ವಾಧಿಕಾರಿ ಧೋರಣೆಯನ್ನು ಮುಂದುವರಿಸಿದ್ದಾರೆ. ಹಾಗಾಗಿ ಅವರ ನಡವಳಿಕೆ ಅವರಿಗೆ ಮುಳುವಾಗಲಿದೆ ಎಂದು ಗೇಟ್ಸ್ ಎಚ್ಚರಿಸಿದರು.