ಕ್ರಿಶ್ಚಿಯನ್ ಸಮುದಾಯದಿಂದ ಪ್ರಭಾವಿತಗೊಂಡಿರುವ ಪ್ರಸಿದ್ಧ ಪೋಕೋ-ಪೋಕೋ ನೃತ್ಯವನ್ನು ಮುಸ್ಲಿಮರು ಮಾಡಬಾರದು ಎಂದು ನಿಷೇಧ ಹೇರಿ ಮಲೇಷ್ಯಾದ ಇಸ್ಲಾಮ್ ಧಾರ್ಮಿಕ ಮುಖಂಡರು ಫರ್ಮಾನು ಹೊರಡಿಸಿದ್ದಾರೆ.
ಮುಸ್ಲಿಮ್ ಪ್ರಾಬಲ್ಯ ಹೊಂದಿರುವ ಮಲೇಷ್ಯಾದಲ್ಲಿ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪೋಕೋ-ಪೋಕೋ ಡ್ಯಾನ್ಸ್ ಮಾಡುವುದು ಸಾಮಾನ್ಯ. ಇದು ಸಾಲಿನಲ್ಲಿ ನಿಂತು ನೃತ್ಯ ಮಾಡುವ ವಿಧಾನವಾಗಿದೆ. ಈ ನೃತ್ಯದ ಮೂಲ ಇಂಡೋನೇಷ್ಯಾ.
ಪೋಕೋ-ಪೋಕೋ ಕ್ರಿಶ್ಚಿಯನ್ ಸಮುದಾಯದ ಸಾಂಪ್ರದಾಯಿಕ ನೃತ್ಯವಾಗಿದೆ. ಅಲ್ಲದೇ ಈ ನೃತ್ಯದಲ್ಲಿ ಶರೀರದ ಕೆಲವು ಭಾಗಗಳು ಕಾಣಿಸುವುದಾಗಿ ಮಲೇಷ್ಯಾದ ಮೌಲ್ವಿ ಹಾರೂಸ್ಸಾನಿ ಇಡ್ರಿಸ್ ಜಾಕ್ರಿಯಾ ಆರೋಪಿಸಿದ್ದಾರೆ. ಹಾಗಾಗಿ ಮುಸ್ಲಿಮರು ಈ ನೃತ್ಯ ಮಾಡದಂತೆ ಪೆರಾಕ್ ಫತ್ವಾ ಕಮಿಟಿ ನಿಷೇಧ ಹೇರಿರುವುದಾಗಿ ತಿಳಿಸಿದರು.
ನೃತ್ಯ ಮಾಡದಂತೆ ನಿಷೇಧ ಹೇರಿ ಫತ್ವಾ ಹೊರಡಿಸಲಾಗಿದೆ. ಇದನ್ನು ಎಲ್ಲರೂ ಗೌರವಿಸಬೇಕು. ಅಲ್ಲದೇ ಈ ಬಗ್ಗೆ ಯಾರೂ ಅನಾವಶ್ಯಕವಾಗಿ ಗೊಂದಲ, ವಿವಾದ ಹುಟ್ಟು ಹಾಕಬಾರದು ಎಂದು ಪಿಎಫ್‌ಸಿನ ಜಾಂಬ್ರೈ ಅಬ್ದುಲ್ ಖಾದ್ರಿ ಮನವಿ ಮಾಡಿಕೊಂಡಿದ್ದಾರೆ.
ಪೋಕೋ-ಪೋಕೋ ನೃತ್ಯದ ನಿಷೇಧ ಅನಾವಶ್ಯಕವಾದದ್ದು ಎಂದು ಮಲೇಷ್ಯಾದ ಮುಸ್ಲಿಮರು ಪ್ರತಿಕ್ರಿಯಿಸಿದ್ದಾರೆ. ಮಲೇಷ್ಯಾದ ಧಾರ್ಮಿಕ ಮುಖಂಡರು ಈಗಾಗಲೇ ಮುಸ್ಲಿಮರು ಯೋಗ ಮಾಡುವುದಾಗಲಿ, ಯುವತಿಯರು ಗಂಡು ಬೀರಿಯಂತೆ ಇರುವ ಬಗ್ಗೆ ನಿಷೇಧ ಹೇರಿದ್ದರು.