ಸಂಜೋತಾ ಬಾಂಬ್ ಸ್ಫೋಟ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಭಾರತ ಪಾಕಿಸ್ತಾನಕ್ಕೆ ವರದಿ ನೀಡಿದೆ. ಅಲ್ಲದೇ ಕಾಶ್ಮೀರ ಹಾಗೂ ಬಾಕಿ ಉಳಿದ ಎಲ್ಲಾ ವಿವಾದಗಳ ಕುರಿತು ಚರ್ಚೆ ನಡೆಸಲು ಉಭಯ ದೇಶಗಳು ಒಪ್ಪಿಕೊಂಡಿರುವುದಾಗಿ ಪಾಕ್ ಆಂತರಿಕ ಸಚಿವ ರೆಹಮಾನ್ ಮಲಿಕ್ ತಿಳಿಸಿದ್ದಾರೆ.
ಸಂಸತ್ ಹೊರಭಾಗದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಭಾರತ ಮತ್ತು ಪಾಕಿಸ್ತಾನ ನಡುವಿನ ಎಲ್ಲಾ ವಿವಾದಗಳನ್ನು ಉಭಯ ದೇಶಗಳು ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳುವುದಾಗಿ ಹೇಳಿದರು. ಅಲ್ಲದೇ ಕಾಶ್ಮೀರ ವಿವಾದದ ಕುರಿತಾಗಿಯೂ ಚರ್ಚೆ ನಡೆಸಲು ಒಪ್ಪಿರುವುದಾಗಿ ವಿವರಿಸಿದರು.
2007ರಲ್ಲಿ ನಡೆದ ಸಂಜೋತಾ ಬಾಂಬ್ ಬ್ಲಾಸ್ಟ್‌ನಲ್ಲಿ 66 ಜನರು ಸಾವನ್ನಪ್ಪಿದ್ದರು. ಇದರಲ್ಲಿ 42 ಪಾಕಿಸ್ತಾನಿ ಪ್ರಜೆಗಳು ಸೇರಿದ್ದರು. ಆ ನಿಟ್ಟಿನಲ್ಲಿ ಘಟನೆ ಕುರಿತ ತನಿಖೆಯ ಅಂಶವನ್ನು ತಮ್ಮ ಜೊತೆ ಹಂಚಿಕೊಳ್ಳುವಂತೆ ಪಾಕಿಸ್ತಾನ ಒತ್ತಡ ಹೇರಿತ್ತು. ಈ ದಾಳಿಯ ಹಿಂದೆ ಸಂಘ ಪರಿವಾರದ ಕಾರ್ಯಕರ್ತರು ಶಾಮೀಲಾಗಿರುವುದಾಗಿ ಸ್ವಾಮಿ ಅಸೀಮಾನಂದ ಭಾರತದ ವಿಶೇಷ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.