ದಕ್ಷಿಣ ಜಾವಾ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಇಂಡೋನೇಷ್ಯಾದ ಬಂದರು ನಗರಿಯಲ್ಲಿನ ಜನರು ದಿಕ್ಕೆಟ್ಟು ಮನೆಯಿಂದ ಹೊರ ಓಡಿ ಹೋಗಿರುವ ಘಟನೆ ಸೋಮವಾರ ನಡೆದಿದೆ.
ಇಂಡೋನೇಷ್ಯಾದ ದಕ್ಷಿಣ ಜಾವಾ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ 6.7ರಷ್ಟು ತೀವ್ರತೆಯ ಭೂಕಂಪ ಸಂಭವಿಸಿರುವುದಾಗಿ ಅಮೆರಿಕದ ಭೂಗರ್ಭಶಾಸ್ತ್ರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜಾವಾದ ಕರಾವಳಿ ಪ್ರದೇಶದಲ್ಲಿ ಈ ಭೂಕಂಪ ಸಂಭವಿಸಿದ್ದು, ಇದರ ಪ್ರಮಾಣ 7.1ರಷ್ಟು ಇದ್ದಿರುವುದಾಗಿ ಇಂಡೋನೇಷ್ಯಾದ ಭೂಗರ್ಭಶಾಸ್ತ್ರಜ್ಞರು ಹೇಳಿದ್ದು, ಸುನಾಮಿ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ. ನಂತರ ಈ ಎಚ್ಚರಿಕೆಯನ್ನು ರದ್ದುಪಡಿಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಭೂಕಂಪ ಸಂಭವಿಸಿದ ಸಂದರ್ಭದಲ್ಲಿ ಸಿಲಾಕೇಪ್ ನಗರದ ನೂರಾರು ಜನರು ಮನೆಯಿಂದ ಹೊರ ಓಡಿಬಂದಿರುವುದಾಗಿ ಎಎಫ್‌ಪಿ ವರದಿ ಮಾಡಿದೆ. ಅವೆರಲ್ಲರೂ ಗಾಬರಿಗೊಂಡು ಭೂಕಂಪ, ಭೂಕಂಪ ಎಂದು ಕೂಗುತ್ತಾ ಓಡಿರುವುದಾಗಿ ವಿವರಿಸಿದೆ.