ಟ್ರೈಪೋಲಿ: ಆಡಳಿತ ಸುಧಾರಣೆ ಹಿನ್ನೆಲೆಯಲ್ಲಿ ಮಾತುಕತೆಗೆ ತಯಾರಿರುವುದಾಗಿ ಲಿಬಿಯಾ ಸರಕಾರ ಮಂಗಳವಾರ ಅಧಿಕೃತವಾಗಿ ಘೋಷಿಸಿದೆ. ಆದರೆ ಯಾವುದೇ ಕಾರಣಕ್ಕೂ ಮೊಅಮ್ಮರ್ ಗಡಾಫಿ ಅಧ್ಯಕ್ಷಗಾದಿಯಿಂದ ಕೆಳಗಿಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ದೇಶದಲ್ಲಿ ಯಾವ ತೆರನಾದ ರಾಜಕೀಯ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಲು ನಾವು ಸಿದ್ದ ಎಂದು ಲಿಬಿಯಾ ಸರಕಾರದ ವಕ್ತಾರ ಮೌಸ್ಸಾ ಇಬ್ರಾಹಿಂ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಆ ನಿಟ್ಟಿನಲ್ಲಿ ಜನಾಭಿಮತ, ಚುನಾವಣೆ ಏನು ಮಾಡಬೇಕು ಎಂಬ ಬಗ್ಗೆ ಹೇಳಲಿ ಅದಕ್ಕೆ ನಾವು ಸಿದ್ದ ಎಂದು ಇಬ್ರಾಹಿಂ ಹೇಳಿದ್ದಾರೆ. ಆದರೆ ಗಡಾಫಿ ಅಧ್ಯಕ್ಷಗಾದಿ ಕುರಿತಂತೆ ಯಾವುದೇ ಮಾತುಕತೆಗೆ ಸಿದ್ದವಿಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ಗಡಾಫಿ ಆಡಳಿತ ಎಲ್ಲ ಜನರಿಗೂ ಸುರಕ್ಷತೆಯನ್ನು ನೀಡಿದೆ. ಹಾಗಾಗಿ ಪಾರದರ್ಶಕ ಆಡಳಿತಕ್ಕೆ ಅವರು ಲಿಬಿಯಾಕ್ಕೆ ತುಂಬಾ ಅಗತ್ಯವಾಗಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ಪ್ರತಿಪಾದಿಸಿದರು.
ಕಳೆದ 42 ವರ್ಷಗಳಿಂದ ತೈಲಸಂಪದ್ಭರಿತ ಲಿಬಿಯಾವನ್ನು ಮೊಅಮ್ಮರ್ ಗಡಾಫಿ ಆಳುತ್ತಿದ್ದಾರೆ. ಸರ್ವಾಧಿಕಾರಿ ಗಡಾಫಿ ಅಧ್ಯಕ್ಷಗಾದಿ ತ್ಯಜಿಸಬೇಕೆಂದು ಆಗ್ರಹಿಸಿದ ಕಳೆದ ಒಂದು ತಿಂಗಳಿನಿಂದ ತೀವ್ರ ಹೋರಾಟ ನಡೆಯುತ್ತಿದೆ. ಏತನ್ಮಧ್ಯೆ ಅಮೆರಿಕ ನೇತೃತ್ವದ ಮೈತ್ರಿ ಪಡೆ ಕೂಡ ಗಡಾಫಿ ನೇತೃತ್ವದ ಮಿಲಿಟರಿ ಪಡೆಯನ್ನು ಹಿಮ್ಮೆಟ್ಟಿಸಲು ವೈಮಾನಿಕ ದಾಳಿ ನಡೆಸುತ್ತಿದೆ. ಇದೀಗ ಆಡಳಿತ ಸುಧಾರಣೆ ಕುರಿತಂತೆ ಲಿಬಿಯಾ ಮಾತುಕತೆಗೆ ಮುಂದಾಗಿದೆ.