ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವೈಟ್‌ಹೌಸ್‌ಗೆ ಲಾಡೆನ್ ಪುತ್ರನನ್ನು ಆಹ್ವಾನಿಸಿದ್ದ ಜಾರ್ಜ್ ಬುಷ್! (George W Bush | Osama bin Laden | Omar Laden | White House | al-Qaeda)
ವೈಟ್‌ಹೌಸ್‌ಗೆ ಲಾಡೆನ್ ಪುತ್ರನನ್ನು ಆಹ್ವಾನಿಸಿದ್ದ ಜಾರ್ಜ್ ಬುಷ್!
ಲಂಡನ್, ಮಂಗಳವಾರ, 5 ಏಪ್ರಿಲ್ 2011( 16:52 IST )
PTI
ಅಧ್ಯಕ್ಷಗಾದಿಯಿಂದ ನಿರ್ಗಮಿಸುವ ಸಮಯದಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯು ಬುಷ್, ತನಗೆ ಶ್ವೇತಭವನಕ್ಕೆ ಬರುವಂತೆ ಆಹ್ವಾನಿಸಿರುವುದಾಗಿ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಒಸಾಮಾ ಬಿನ್ ಲಾಡೆನ್ ಪುತ್ರನೊಬ್ಬ ಹೊಸ ಬಾಂಬ್‌ವೊಂದನ್ನು ಸಿಡಿಸಿದ್ದಾನೆ.
ಅಲ್ ಖಾಯಿದಾ ಟೆರರ್ ನೆಟ್ವರ್ಕ್ ಸ್ಥಾಪಕ ಲಾಡೆನ್‌ನ ನಾಲ್ಕನೇ ಪುತ್ರ ಓಮರ್ ಲಾಡೆನ್, ತನಗೆ ಶ್ವೇತಭವನಕ್ಕೆ ಭೇಟಿ ನೀಡುವಂತೆ 2009 ಜನವರಿಯಲ್ಲಿ ಶ್ವೇತಭವನದ ಅಧಿಕಾರಿಗಳು ಕಳುಹಿಸಿರುವ ಪತ್ರವೊಂದನ್ನು ದೋಹಾದಲ್ಲಿರುವ ಮನೆಯಲ್ಲಿ ಸ್ವೀಕರಿಸಿರುವುದಾಗಿ ಆರೋಪಿಸಿದ್ದಾನೆ.
'ಶ್ವೇತಭವನದಲ್ಲಿ ತಮ್ಮ ಜತೆಗೂಡುವಂತೆ ಬುಷ್ ಆಹ್ವಾನಿಸಿದ್ದರು. ಯಾಕೆಂದರೆ ನನ್ನ ತಂದೆಯನ್ನು ಪತ್ತೆ ಹಚ್ಚುವ ಕೆಲಸಕ್ಕೆ ತಾನು ನೆರವಾಗಬೇಕೆಂಬ ಷರತ್ತನ್ನು ಅವರು ವಿಧಿಸಿರುವುದಾಗಿ' ಓಮರ್ ಲಾಡೆನ್ ಸ್ಪೆಯ್ನ್‌ನ ದೈನಿಕ ಲಾ ವಾನ್‌ಗುವಾರ್ಡಿಯಾಕ್ಕೆ ತಿಳಿಸಿದ್ದಾನೆ.
ಆದರೆ ತಾನು ಬುಷ್ ಆಹ್ವಾನವನ್ನು ತಿರಸ್ಕರಿಸಿರುವುದಾಗಿ 29ರ ಹರೆಯದ ಓಮರ್ ಸ್ಪಷ್ಟಪಡಿಸಿದ್ದು, ನನ್ನ ಕ್ಷಮಿಸಿ, ಆ ಕೆಲಸ ನನ್ನಿಂದ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದೆ. ಅವರು ನನ್ನ ತಂದೆ, ನಾನು ಆತನ ಮಗ. ಹಾಗಾಗಿ ತಂದೆಯ ಮಗನಾಗಿ ನಾನು ಅವರನ್ನು ಪ್ರೀತಿಸುವುದು ಮತ್ತು ಗೌರವಿಸುವುದು ನನ್ನ ಕರ್ತವ್ಯ ಎಂದು ಹೇಳಿರುವುದಾಗಿ ವಿವರಿಸಿದ್ದಾನೆ.
ಏತನ್ಮಧ್ಯೆ, ತಾನು ತನ್ನ ತಂದೆಯ ಎಲ್ಲಾ ಕೆಲಸಗಳನ್ನು ಸಮರ್ಥಿಸುವುದಿಲ್ಲ ಎಂದು ಹೇಳಿಕೊಂಡಿರುವ ಓಮರ್, ತನ್ನ ತಂದೆಯ ಜೊತೆ ಸಂಪರ್ಕವಿಲ್ಲದೆ ಹತ್ತು ವರ್ಷಗಳೇ ಕಳೆದಿರುವುದಾಗಿ ತಿಳಿಸಿದ್ದಾನೆ.