ಬೆನಜೀರ್ ಭುಟ್ಟೋ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಪರ್ವೆಜ್ ಮುಷರ್ರಫ್ ಅವರನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಬಗ್ಗೆ ಪರಿಗಣಿಸುವುದಾಗಿ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ತಿಳಿಸಿದ್ದಾರೆ.
ಮಂಗಳವಾರ ಒಂದು ದಿನಗಳ ಕಾಲ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಡೇವಿಡ್ ಈ ರೀತಿ ಪ್ರತಿಕ್ರಿಯೆ ನೀಡಿರುವುದಾಗಿ ಸಾಮಾ ಟಿವಿ ವರದಿ ಮಾಡಿದೆ.
1999ರಲ್ಲಿ ರಕ್ತರಹಿತ ಕ್ರಾಂತಿ ಮೂಲಕ ಪಾಕಿಸ್ತಾನದ ಅಧ್ಯಕ್ಷಗಾದಿಗೆ ಏರಿದ್ದ ಜನರಲ್ ಪರ್ವೆಜ್ ಮುಷರ್ರಫ್ ಸುಮಾರು 9 ವರ್ಷಗಳ ಕಾಲ ಆಡಳಿತ ನಡೆಸಿದ್ದರು. 2008ರಲ್ಲಿ ಮುಷ್ ಅಧಿಕಾರದಿಂದ ಕೆಳಗಿಳಿದಿದ್ದರು. ನಂತರ ಸ್ವಯಂ ಗಡಿಪಾರುಗೊಂಡು ಲಂಡನ್‌ನಲ್ಲಿ ವಾಸ್ತವ್ಯ ಹೂಡಿದ್ದರು.
ಮುಷರ್ರಫ್ ಅಧ್ಯಕ್ಷರಾಗಿದ್ದ (2007 ಡಿ.27ರಂದು) ಅವಧಿಯಲ್ಲೇ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ಏತನ್ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.19ರಂದು ರಾವಲ್ಪಿಂಡಿಯ ಭಯೋತ್ಪಾದನ ನಿಗ್ರಹ ಕೋರ್ಟ್ ಮುಷರ್ರಫ್ ವಿರುದ್ಧ ಬಂಧನದ ವಾರಂಟ್ ಹೊರಡಿಸಿತ್ತು.