ಲಂಚ ಸ್ವೀಕರಿಸಿದ ಆರೋಪದಲ್ಲಿ ಚೀನಾ ಉನ್ನತ ಅಧಿಕಾರಿಯೊಬ್ಬರಿಗೆ ಚೀನಾ ಕೋರ್ಟ್ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ನಿಂಕ್ಸಿಯಾ ಹುಯಿ ಆಟೋನೋಮಸ್ ಪ್ರಾಂತ್ಯದ ಲೀ ಟಾಂಗ್‌ಟಾಂಗ್ ಶಿಕ್ಷೆಗೆ ಒಳಗಾದ ಮಾಜಿ ಅಧಿಕಾರಿ.
1.17 ಮಿಲಿಯನ್ ಡಾಲರ್ ಲಂಚ ಸ್ವೀಕರಿಸಿದ ಆರೋಪದಡಿಯಲ್ಲಿ ವಾಯುವ್ಯ ಚೀನಾದ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿರುವುದಾಗಿ ವರದಿ ತಿಳಿಸಿದೆ. ಅಲ್ಲದೇ ಮಾಜಿ ಅಧಿಕಾರಿಯ ವೈಯಕ್ತಿಕ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು, ಜೀವಿತಾವಧಿಯ ಎಲ್ಲಾ ರಾಜಕೀಯ ಹಕ್ಕುಗಳನ್ನು ಕಿತ್ತುಕೊಳ್ಳುವಂತೆ ಕೋರ್ಟ್ ಆದೇಶ ನೀಡಿದೆ.
ಲೀ ಟಾಂಗ್‌ಟಾಂಗ್ ಆಟೋ ಕಂಪನಿಯಿಂದ 1.17 ಮಿಲಿಯನ್ ಡಾಲರ್ ಲಂಚ ಸ್ವೀಕರಿಸಿರುವುದನ್ನು ಕೋರ್ಟ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದರು. ಅಲ್ಲದೇ ಲೀ ತಮ್ಮ ಅಧಿಕಾರವನ್ನು ದುರಪಯೋಗಪಡಿಸಿಕೊಂಡಿರುವುದಾಗಿಯೂ ಆರೋಪಿಸಲಾಗಿದೆ. ಇವರು ಶಾಂಕ್ಸಿ ಪ್ರಾಂತ್ಯದಲ್ಲಿ ಉನ್ನತ ಮಟ್ಟದ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು.
ಅಷ್ಟೇ ಅಲ್ಲದೇ ಲೀ 1998ರಿಂದ 2008ರವರೆಗೆ ಶಾಂಕ್ಸಿ ಪ್ರಾಂತ್ಯದ ಉಪ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. ಅದೇ ರೀತಿ ಬಾಯೋಜಿ ನಗರದ ಉಪ ಮೇಯರ್ ಕೂಡ ಆಗಿದ್ದರು. ನಂತರ 2008ರ ಮೇ ತಿಂಗಳಿನಲ್ಲಿ ನಿಂಕ್ಸಿಯಾ ಹುಯಿ ಆಟೋನೋಮಸ್ ಪ್ರಾಂತ್ಯದ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.