ಅಸೋಸಿಯೇಟೆಡ್ ಪ್ರೆಸ್‌ನ ಪ್ರಶಸ್ತಿ ವಿಜೇತ ಫೋಟೋಗ್ರಾಫರ್ ಗಲಭೆ ಪೀಡಿತ ಲಿಬಿಯಾದಲ್ಲಿ ನಾಪತ್ತೆಯಾಗಿರುವುದಾಗಿ ಸುದ್ದಿ ಸಂಸ್ಥೆಯೊಂದು ತಿಳಿಸಿದೆ.
ಎಪಿಯ ಅಲ್ತಾಫ್ ಖಾದ್ರಿ ಅವರು ಬೆಂಘಾಜಿಯಲ್ಲಿರುವ ಕಚೇರಿಗೆ ಸುರಕ್ಷಿತವಾಗಿ ವಾಪಸಾಗುತ್ತಿದ್ದರು ಎಂದು ಇಂಟರ್‌ನ್ಯಾಷನಲ್ ನ್ಯೂಸ್ ಮತ್ತು ಫೋಟೋದ ಹಿರಿಯ ಆಡಳಿತ ಸಂಪಾದಕ ಡಾನಿಸೆಜೆವಾಸ್ಕಿ ಹೇಳಿದ್ದಾರೆ. ಆದರೆ ಈ ಸಂದರ್ಭದಲ್ಲಿ ತಮ್ಮ ಮಿತ್ರರೊಡನೆ ಆಗಮಿಸುತ್ತಿದ್ದ ಖಾದ್ರಿ ಪೂರ್ವ ಲಿಬಿಯಾದ ಅಜ್ದಾಬಿಯಾ ನಗರದಲ್ಲಿ ಪ್ರತ್ಯೇಕಗೊಂಡಿದ್ದರು ಎಂದು ಅವರು ವಿವರಿಸಿದ್ದಾರೆ.
ಹಿಂಸಾಚಾರ ಪೀಡಿತ ಪ್ರದೇಶದಿಂದ ಸುದ್ದಿ ಮಾಡುತ್ತಿದ್ದ ಸಂದರ್ಭದಲ್ಲಿಯೂ ಖಾದ್ರಿ ಸುರಕ್ಷಿತವಾಗಿದ್ದರು. ಆ ನಿಟ್ಟಿನಲ್ಲಿ ಅವರು ಸುರಕ್ಷಿತವಾಗಿ ಮರಳಲಿ ಎಂಬ ಉದ್ದೇಶದಿಂದ ಜಾಗತಿಕವಾಗಿ ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ಖಾದ್ರಿ (35) ಅವರು ಕಳೆದ ವರ್ಷ ವರ್ಲ್ಡ್ ಪ್ರೆಸ್ ಫೋಟೋ ಪ್ರಶಸ್ತಿಗೆ ಭಾಜನರಾಗಿದ್ದರು. ಖಾದ್ರಿ ಅವರು ಭಾರತೀಯ ಪ್ರಜೆಯಾಗಿದ್ದು, ಅವರು ಶ್ರೀನಗರದ ನಿವಾಸಿ. ಅವರು 2001ರಲ್ಲಿ ಸ್ಥಳೀಯ ಕಾಶ್ಮೀರಿ ಸ್ಥಳೀಯ ಮಾಧ್ಯಮವೊಂದರಲ್ಲಿ ಫೋಟೋಗ್ರಾಫರ್ ಆಗಿ ಕಾರ್ಯನಿರ್ವಹಿಸುವ ಮುನ್ನ ಕಾಶ್ಮೀರ ಯೂನಿರ್ವಸಿಟಿಯಲ್ಲಿ ವಿಜ್ಞಾನ ಪದವಿ ಪಡೆದಿದ್ದರು.