2008ರಲ್ಲಿ ಮುಂಬೈಗೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾಗಿರುವ ಐಎಸ್‌ಐಗೆ ಯಾವುದೇ ಕೈವಾಡವಿಲ್ಲ ಎಂದು ಪಾಕಿಸ್ತಾನದ ಆಂತರಿಕ ಸಚಿವ ರೆಹ್ಮಾನ್ ಮಲಿಕ್ ತಿಳಿಸಿದ್ದಾರೆ.
2008ರಲ್ಲಿ ದೇಶದ ವಾಣಿಜ್ಯ ನಗರಿ ಮುಂಬೈಗೆ ನಡೆದಿದ್ದ ಉಗ್ರರ ದಾಳಿಯಲ್ಲಿ 176 ಮಂದಿ ಬಲಿಯಾಗಿದ್ದರು. ಈ ಸಂಬಂಧ ಕೆಲವು ದಿನಗಳ ಹಿಂದೆಯಷ್ಟೇ ಅಮೆರಿಕಾ ನ್ಯಾಯಲದಲ್ಲಿ ತಪ್ಪೊಪ್ಪಿಕೊಂಡಿದ್ದ ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ತವ್ವೂರ್ ಹುಸೇನ್ ರಾಜಾ ತಾನು ಪಾಕ್ ಸರ್ಕಾರ ಹಾಗೂ ಐಎಸ್‌ಐ ಸಂಸ್ಥೆಯ ಆಣತಿಯಂತೆಯೇ ಮುಂಬೈ ದಾಳಿಗೆ ಅಗತ್ಯ ನೆರವನ್ನು ಒದಗಿಸಿದ್ದೆ ಎಂದಿದ್ದರು.
ಇದಕ್ಕೆ ಪ್ರತಿಯಾಗಿ ಮಲಿಕ್ ಇಂತಹದೊಂದು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ನಡುವೆ ಮುಂಬೈ ದಾಳಿಕೋರರ ವಿರುದ್ಧ ಅಗತ್ಯ ಪುರಾವೆ ನಮ್ಮ ಬಳಿಯಿದೆ ಎಂದು ಮಿಲಿಕ್ ತಿಳಿಸಿದ್ದಾರೆ. ಆದರೆ ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.