ಬಾಂಗ್ಲಾದೇಶದ ನಿಷೇಧಿತ ಹರ್ಕತ್ ಉಲ್ ಜಿಹಾದ್ (ಹುಜಿ) ಸಂಘಟನೆಯ ವರಿಷ್ಠನಾಗಿದ್ದ ಮೋಸ್ಟ್ ವಾಂಟೆಡ್ ಶೇಕ್ ಮೊಹಮ್ಮದ್ ಫಾರಿದ್ ಎಂಬಾತನನ್ನು ಅಪರಾಧ ನಿಗ್ರಹ ರಾಪಿಡ್ ಆಕ್ಷನ್ ಬೆಟಾಲಿಯನ್ ಟೋಂಗಿ ಎಂಬಲ್ಲಿ ಸೆರೆ ಹಿಡಿದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 48 ಗಂಟೆಗಳ ತೀವ್ರ ಕಾರ್ಯಾಚರಣೆಯಲ್ಲಿ ನಾವು ಮೊಹಮ್ಮದ್ ಫಾರಿದ್‌ನನ್ನು ಬಂಧಿಸಿರುವುದಾಗಿ ಆರ್ಎಬಿ ವಕ್ತಾರ ಕಮಾಂಡರ್ ಎಂ.ಸೊಹೈಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ವಿವರಿಸಿದ್ದಾರೆ. ರಾಜಧಾನಿ ಢಾಕಾ ಸಮೀಪದ ಟೋಂಗಿ ಪ್ರದೇಶದಲ್ಲಿ ಸೆರೆ ಹಿಡಿದಿರುವುದಾಗಿ ಹೇಳಿದರು.
ಹಲವು ವರ್ಷಗಳಿಂದ ಹುಜಿ ಸಂಘಟನೆಯಲ್ಲಿದ್ದ ಉಗ್ರ ಫಾರಿದ್(47)ನ ಬಂಧನಕ್ಕೆ ಸಾಕಷ್ಟು ಬಾರಿ ಯೋಜನೆ ರೂಪಿಸಲಾಗಿತ್ತು. ಇತ್ತೀಚೆಗಷ್ಟೇ ಸಂಘಟನೆಯ ಇಬ್ಬರು ಉಗ್ರರನ್ನು ಬಂಧಿಸಲಾಗಿದ್ದು ಅವರು ನೀಡಿದ ಮಾಹಿತಿ ಮೇರೆಗೆ ಫಾರಿದ್ ಬಂಧನ ಸಾಧ್ಯವಾಗಿರುವುದಾಗಿ ಅವರು ತಿಳಿಸಿದರು.
1999ರಲ್ಲಿ ನಡೆದ ದಾಳಿ, 2001ರಲ್ಲಿ ರಾಮ್ನಾ ಬಾಟ್ಮುಲ್ ಪ್ರದೇಶದಲ್ಲಿನ ಬೈಸಾಕಿ ಹಬ್ಬದಂದು ನಡೆಸಿದ ದಾಳಿ, 2004ರಲ್ಲಿ ಅವಾಮಿ ಲೀಗ್ ರಾಲಿ ವೇಳೆಯ ದಾಳಿ ಸೇರಿದಂತೆ ನಾಲ್ಕು ಪ್ರಮುಖ ಪ್ರಕರಣಗಳಲ್ಲಿ ಫಾರಿದ್ ಶಾಮೀಲಾಗಿದ್ದ. ಆ ನಿಟ್ಟಿನಲ್ಲಿ ಫಾರಿದ್ ಮೋಸ್ಟ್ ವಾಟೆಂಡ್ ಉಗ್ರನಾಗಿದ್ದ.