ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾದ ನಂತರ ತಾನೀಗ ಶುದ್ಧ ಧಾರ್ಮಿಕ ಮುಖಂಡನಾಗಿ ಸೇವೆ ಸಲ್ಲಿಸುವುದಾಗಿ ದಲೈಲಾಮಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಟಿಬೆಟಿಯನ್ನರ ಧಾರ್ಮಿಕ ಗುರು ಹಾಗೂ ದೇಶಭ್ರಷ್ಟ ಸರಕಾರದ ಮುಖ್ಯಸ್ಥರಾಗಿದ್ದ ಅವರು ಇತ್ತೀಚೆಗಷ್ಟೇ ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗಿದ್ದರು. ತದನಂತರ ಟಿಬೆಟ್‌ನ ನೂತನ ಪ್ರಧಾನಮಂತ್ರಿಯನ್ನಾಗಿ ಲೋಬ್ಸಾಂಗ್ ಸ್ಯಾಂಗಾಯ್ ಅವರನ್ನು ಆಯ್ಕೆ ಮಾಡಲಾಗಿತ್ತು.
ದೇಶಭ್ರಷ್ಟ ಟಿಬೆಟ್ ಸರಕಾರದ 14ನೇ ಸಂಸತ್‌ನ 11ನೇ ಅಧಿವೇಶನ ಮಾರ್ಚ್ 14ರಂದು ನಡೆದ ಸಂದರ್ಭದಲ್ಲಿ, ತಮ್ಮ ಅಧಿಕಾರವನ್ನು ಔಪಚಾರಿಕವಾಗಿ ಚುನಾಯಿತರಾದ ವ್ಯಕ್ತಿಗೆ ಹಸ್ತಾಂತರಿಸುವುದಾಗಿ ದಲೈಲಾಮಾ ಘೋಷಿಸಿದ್ದರು. ಆ ನಿಟ್ಟಿನಲ್ಲಿ ತಮ್ಮ ಎಲ್ಲಾ ರಾಜಕೀಯ ಅಧಿಕಾರವನ್ನು ಚುನಾಯಿತ ರಾಜಕೀಯ ಮುಖಂಡ ಸ್ಯಾಂಗಾಯ್ ಅವರಿಗೆ ಹಸ್ತಾಂತರಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಅವರು ಮಾರ್ಚ್ 11ರಂದು ಜಪಾನ್‌ನಲ್ಲಿ ಸಂಭವಿಸಿದ ಭೀಕರ ಸುನಾಮಿ, ಭೂಕಂಪ ದುರಂತದಲ್ಲಿ ಮಡಿದವರಿಗೆ ಇಲ್ಲಿನ ಬುದ್ಧ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿ ತಮ್ಮ ಅಭಿಪ್ರಾಯವ್ಯಕ್ತಪಡಿಸಿದರು.
ದೇಶಭ್ರಷ್ಟ ಟಿಬೆಟ್ ಸರಕಾರದ ನೂತನ ಪ್ರಧಾನಿಯನ್ನಾಗಿ ಹಾರ್ವರ್ಡ್ ಕಾನೂನು ಪದವೀಧರ ಸ್ಯಾಂಗಾಯ್ ಅವರನ್ನು ನೇಮಕ ಮಾಡಿದ ಎರಡು ದಿನಗಳ ನಂತರ ದಲೈಲಾಮಾ ಈ ಹೇಳಿಕೆಯನ್ನು ನೀಡಿದ್ದಾರೆ. ಅಲ್ಲದೇ ನನ್ನ ಎಲ್ಲಾ ರಾಜಕೀಯ ಅಧಿಕಾರವನ್ನು ನೂತನವಾಗಿ ಆಯ್ಕೆಯಾದ ಸ್ಯಾಂಗಾಯ್ ಅವರಿಗೆ ನೀಡಲು ನಿರ್ಧರಿಸಿರುವುದಾಗಿ ಸ್ಪಷ್ಟಪಡಿಸಿದರು.
ಅಲ್ಲದೇ ತಾನು ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗಲು ಕೈಗೊಂಡ ನಿರ್ಧಾರ ಸಕಾಲವಾಗಿದ್ದು, ಈ ಬಗ್ಗೆ ಟಿಬೆಟ್‌ನ ಬಹುಸಂಖ್ಯೆಯ ಜನರು ಇದನ್ನು ಅರ್ಥಮಾಡಿಕೊಂಡಿರುವುದಾಗಿ ಹೇಳಿದರು.