ಜನ ವಿರೋಧದಿಂದ ತೀವ್ರ ಪ್ರತಿಭಟನೆ ಎದುರಿಸುತ್ತಿರುವ ಲಿಬಿಯಾ ಸರ್ವಾಧಿಕಾರಿ ಮೊಅಮ್ಮರ್ ಗಡಾಫಿ, ಕದನ ವಿರಾಮ ಒಪ್ಪಂದಕ್ಕೆ ತಯಾರು ಎಂದು ಶನಿವಾರ ಪುನರುಚ್ಚರಿಸಿದ್ದಾರೆ. ಆದರೆ ತಾನು ಯಾವುದೇ ಕಾರಣಕ್ಕೂ ಅಧಿಕಾರವನ್ನು ಬಂಡುಕೋರರ ಕೈಗೆ ಒಪ್ಪಿಸಲ್ಲ ಎಂದು ತಿರುಗೇಟು ನೀಡಿದ್ದಾರೆ.
ಆದರೆ ಅಧಿಕಾರದ ಗದ್ದುಗೆಯಿಂದ ಕೆಳಗಿಳಿಯದೆ ಕೇವಲ ಕದನ ವಿರಾಮ ಒಪ್ಪಂದದ ಗಡಾಫಿ ಕೋರಿಕೆಯನ್ನು ಬಂಡುಕೋರರು ಮತ್ತು ನ್ಯಾಟೋ ಸಾರಸಗಟಾಗಿ ತಿರಸ್ಕರಿಸಿದ್ದಾರೆ. ಅವರು ವಿಶ್ವಾಸವನ್ನು ಕಳೆದುಕೊಂಡು ಅಧ್ಯಕ್ಷರಾಗಿದ್ದು, ಗದ್ದುಗೆಯಿಂದ ಕೆಳಗಿಳಿಯುವುದೇ ಅವರಿಗೆ ಇರುವ ಕೊನೆಯ ಅವಕಾಶ ಎಂದು ಸ್ಪಷ್ಟಪಡಿಸಿವೆ.
ಸಂಧಾನದ ಸಮಯ ಈಗಾಗಲೇ ಕಳೆದುಹೋಗಿದೆ ಎಂದು ಬಂಡುಕೋರರ ವಕ್ತಾರು ತಿಳಿಸಿದ್ದಾರೆ. ಅಲ್ಲದೇ ಲಿಬಿಯಾ ಮಿಲಿಟರಿ ಪಡೆ ನಾಗರಿಕರನ್ನು ಹತ್ತಿಕ್ಕುವ ಕೆಲಸವನ್ನು ಮುಂದುವರಿಸಿರುವುದಾಗಿಯೂ ಆರೋಪಿಸಿದೆ.
ಇದೀಗ ಅಧ್ಯಕ್ಷಗಾದಿಯಿಂದ ಕೆಳಗಿಳಿಯಲೇಬೇಕೆಂಬ ಬಂಡುಕೋರರ ಬಿಗಿಪಟ್ಟಿನ ನಡುವೆಯೇ, ತಾನು ಕದನ ವಿರಾಮಕ್ಕೆ ಸಿದ್ದನಿದ್ದೇನೆ ಎಂದು ಗಡಾಫಿ ಶನಿವಾರ ಕೋರಿಕೆ ಸಲ್ಲಿಸಿದ್ದಾರೆ.
ಕಳೆದ 42 ವರ್ಷಗಳಿಂದ ಲಿಬಿಯಾವನ್ನು ಆಳುತ್ತಿರುವ ಸರ್ವಾಧಿಕಾರಿ ಮೊಅಮ್ಮರ್ ಗಡಾಫಿ ಅಧ್ಯಕ್ಷಗಾದಿಯಿಂದ ಕೆಳಗಿಳಿಯಬೇಕೆಂದು ಒತ್ತಾಯಿಸಿ ತಿಂಗಳುಗಳಿಂದ ಪ್ರತಿಭಟನೆ ನಡೆಯುತ್ತಲೇ ಇದೆ. ಅಲ್ಲದೇ ಗಡಾಫಿ ಅಧಿಕಾರ ತ್ಯಜಿಸುವಂತೆ ಅಮೆರಿಕ ಸೇರಿದಂತೆ ಹಲವು ದೇಶಗಳು ಒತ್ತಡ ಹೇರಿದ್ದವು. ಆದರೆ ಗಡಾಫಿ ತಾನು ಯಾವುದೇ ಕಾರಣಕ್ಕೂ ಅಧಿಕಾರದಿಂದ ಗದ್ದುಗೆಯಿಂದ ಕೆಳಗಿಳಿಯಲ್ಲ ಎಂದು ಪಟ್ಟು ಹಿಡಿದಿರುವುದು ಸಂಘರ್ಷ ಮುಂದುವರಿಯಲು ಕಾರಣವಾಗಿದೆ.