ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಬಣ್ಣ ಬಯಲು; ಒಸಾಮಾ ಬಿನ್ ಲಾಡೆನ್ ಫಿನಿಶ್ (Osma bin Laden | al queida | Pakistan | America | Obama)
PR
2001 ಸೆಪ್ಟೆಂಬರ್ 11ರ ದಾಳಿಯ ಮಾಸ್ಟರ್ ಮೈಂಡ್, ಜಾಗತಿಕ ಭಯೋತ್ಪಾದಕನಾಗಿದ್ದ ಅಲ್ ಖಾಯಿದಾ ಸಂಘಟನೆಯ ವರಿಷ್ಠ ಒಸಾಮಾ ಬಿನ್ ಲಾಡೆನ್ ಅನ್ನು ಅಮೆರಿಕ ನೇತೃತ್ವದ ಪಡೆ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಹತ್ಯೆಗೈದಿರುವುದಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಘೋಷಿಸಿದ್ದಾರೆ.

ನಾಟಕೀಯ ಬೆಳವಣಿಗೆಯೊಂದರಲ್ಲಿ ಭಾನುವಾರ ತಡರಾತ್ರಿ ಶ್ವೇತಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಒಬಾಮಾ, ಪಾಕಿಸ್ತಾನದ ವಾಯುವ್ಯ ಇಸ್ಲಾಮಾಬಾದ್‌ ಪ್ರದೇಶದ ಅಬುತಾಬಾದ್‌ನಲ್ಲಿ ಅಮೆರಿಕ ಸೇನಾ ಪಡೆ ಕೈಗೊಂಡ ಕಾರ್ಯಾಚರಣೆಯಲ್ಲಿ ಒಸಾಮಾ ಬಿನ್ ಲಾಡೆನ್ ಸಾವನ್ನಪ್ಪಿರುವುದಾಗಿ ಖಚಿತಪಡಿಸಿದರು.

2001ರಲ್ಲಿ ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ನಡೆಸಿದ ದಾಳಿಯಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಸಾವಿರಾರು ಮಂದಿಯನ್ನು ಹತ್ಯೆಗೈದಿದ್ದ ಲಾಡೆನ್ ಕೊನೆಗೂ ಅಮೆರಿಕ ಸೇನಾಪಡೆಯ ಕಾರ್ಯಾಚರಣೆಯಲ್ಲಿ ಬಲಿಯಾಗಿರುವುದಾಗಿ ಹೇಳಿದರು. ಆ ನಿಟ್ಟಿನಲ್ಲಿ ಕಳೆದ ಹತ್ತು ವರ್ಷಗಳಿಂದ ಭಯೋತ್ಪಾದನೆ ವಿರುದ್ಧ ನಡೆಸುತ್ತಿದ್ದ ಸಮರಕ್ಕೆ ಜಯ ದೊರೆತಂತಾಗಿದೆ ಎಂದರು.

ಇಸ್ಲಾಮಾಬಾದ್ ಹೊರವಲಯದ ಕಟ್ಟಡವೊಂದರಲ್ಲಿ ಒಸಾಮಾ ಅಡಗಿ ಕುಳಿತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಪಾಕಿಸ್ತಾನದ ನೆರವಿನೊಂದಿಗೆ ನಡೆಸಿದ ದಾಳಿಯಲ್ಲಿ ಒಸಾಮಾ ಹಾಗೂ ಆತನ ಇಪ್ಪತ್ತು ಮಂದಿ ಸಹಚರರು ಸಾವನ್ನಪ್ಪಿರುವುದಾಗಿ ಬರಾಕ್ ತಿಳಿಸಿದ್ದಾರೆ.

ಲಾಡೆನ್ ಶವ ನಮ್ಮ ವಶದಲ್ಲಿದೆ-ಬರಾಕ್:
ಅಮೆರಿಕ ಸೇನಾ ಕಾರ್ಯಾಚರಣೆಯಲ್ಲಿ ಸಾವಿಗೀಡಾಗಿರುವ ಒಸಾಮಾ ಬಿನ್ ಲಾಡೆನ್ ಶವ ನಮ್ಮ ವಶದಲ್ಲಿದೆ ಎಂದು ಬರಾಕ್ ಒಬಾಮಾ ತಿಳಿಸಿದ್ದಾರೆ. ಏತನ್ಮಧ್ಯೆ ಒಸಾಮಾ ಬಿನ್ ಲಾಡೆನ್ ಹತ್ಯೆ ಕುರಿತಂತೆ ಅಲ್ ಖಾಯಿದಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪಾಕಿಸ್ತಾನದ ಡಬಲ್ ಗೇಮ್ ಬಯಲು:
ಜಗತ್ತಿನ ಮೋಸ್ಟ್ ವಾಂಟೆಡ್ ಭಯೋತ್ಪಾದಕನಾಗಿದ್ದ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಭಾಗದಲ್ಲಿಯೇ ಅಡಗಿಕೊಂಡಿರುವುದಾಗಿ ಅಮೆರಿಕ ಸಾಕಷ್ಟು ಬಾರಿ ಹೇಳಿತ್ತು. ಆದರೆ ಪಾಕಿಸ್ತಾನ ಮಾತ್ರ ಲಾಡೆನ್ ಪಾಕಿಸ್ತಾನದಲ್ಲಿ ಠಿಕಾಣಿ ಹೂಡಿಯೇ ಇಲ್ಲ ಎಂದು ವಾದಿಸುತ್ತಿತ್ತು.

ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲಿಯೇ ಅಡಗಿಕೊಂಡಿದ್ದು, ಆತನ ಸೆರೆ ಅಥವಾ ಹತ್ಯೆಗೆ ಸಹಕರಿಸಬೇಕೆಂದು ಅಮೆರಿಕ ಹಲವು ಬಾರಿ ಮನವಿ ಮಾಡಿತ್ತು. ಎಷ್ಟೇ ತಿಪ್ಪರಲಾಗ ಹಾಕಿದರು ಪಾಕಿಸ್ತಾನ, ಸುತಾರಾಂ ಲಾಡೆನ್ ಇರುವಿಕೆಯ ಬಗ್ಗೆ ಬಾಯಿ ಬಿಟ್ಟಿಲ್ಲವಾಗಿತ್ತು. ಇದೀಗ ಇಸ್ಲಾಮಾಬಾದ್ ಹೊರವಲಯದಲ್ಲಿಯೇ ಅಮೆರಿಕ ಪಡೆ ಕ್ಷಿಪಣಿ ದಾಳಿಯಲ್ಲಿ ಉಗ್ರ ಒಸಾಮಾ ಬಿನ್ ಲಾಡೆನ್ ಹತ್ಯೆಯಾಗುವ ಮೂಲಕ ಪಾಕಿಸ್ತಾನದ ಡಬ್ಬಲ್ ಗೇಮ್ ಬಟಾಬಯಲಾದಂತಾಗಿದೆ.

ಅಮೆರಿಕದಾದ್ಯಂತ ಸಂಭ್ರಮಾಚರಣೆ:
ಅಮೆರಿಕ ವರ್ಲ್ಡ್ ಟ್ರೇಡ್ ಸೆಂಟರ್ ದಾಳಿಯ ರೂವಾರಿ, ಸಾವಿರಾರು ಜನರ ಹತ್ಯೆಗೆ ಕಾರಣನಾಗಿದ್ದ ಅಲ್ ಖಾಯಿದಾ ವರಿಷ್ಠ ಒಸಾಮಾ ಬಿನ್ ಲಾಡೆನ್ ಹತ್ಯೆಯ ಸುದ್ದಿಯನ್ನು ಬರಾಕ್ ಒಬಾಮಾ ಘೋಷಿಸುತ್ತಿದ್ದಂತೆಯೇ ಅಮೆರಿಕದಾದ್ಯಂತ ಜನರು ಭಾನುವಾರ ರಾತ್ರಿಯಿಂದಲೇ ಶ್ವೇತಭವನದ ಮುಂಭಾಗದಲ್ಲಿ ಜಮಾಯಿಸಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಬೀದಿ, ಬೀದಿಯಲ್ಲಿ ನೆರೆದ ಅಮೆರಿಕನ್‌ರು ಲಾಡೆನ್‌ಗೆ ಧಿಕ್ಕಾರ, ಅಮೆರಿಕಕ್ಕೆ ಜೈ ಎಂಬ ಘೋಷಣೆ ಕೂಗುವ ಮೂಲಕ ತಮ್ಮ ಸಂತಸ ಹಂಚಿಕೊಂಡರು.
ಇವನ್ನೂ ಓದಿ