'ಉಗ್ರ ಒಸಾಮಾ ಬಿನ್ ಲಾಡೆನ್ ಎಂದಿಗೂ ಮುಸ್ಲಿಮ್ ನಾಯಕನಲ್ಲ. ಅಲ್ಲದೇ ಆತ ಧಾರ್ಮಿಕ ವ್ಯಕ್ತಿಯೂ ಅಲ್ಲ. ಆತ ವಿಶ್ವಕ್ಕೇ ಬೇಕಾಗಿದ್ದ ದೊಡ್ಡ ಕೊಲೆಗಡುಕ' ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಭಾನುವಾರ ತಡರಾತ್ರಿ ಪಾಕಿಸ್ತಾನದ ಅಬುತಾಬಾದ್‌ನಲ್ಲಿ ಅಮೆರಿಕ ಸೇನಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಒಸಾಮಾ ಬಿನ್ ಲಾಡೆನ್ ಸಾವನ್ನಪ್ಪಿರುವುದಾಗಿ ಸುದ್ದಿಗೋಷ್ಠಿ ನಡೆಸಿ ಘೋಷಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಸಮರ ಇಸ್ಲಾಮ್ ಧರ್ಮದ ವಿರುದ್ಧವಲ್ಲ. ನಮ್ಮ ಸಮರ ಏನಿದ್ದರೂ ಭಯೋತ್ಪಾದನೆ ವಿರುದ್ಧ ಎಂದು ಸ್ಪಷ್ಟಪಡಿಸಿದರು.
ಸುಮಾರು ಹತ್ತು ವರ್ಷಗಳ ಕಾಲ ಜಾಗತಿಕವಾಗಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತ ಕಂಟಕಪ್ರಾಯನಾಗಿದ್ದ ಲಾಡೆನ್ ಹತ್ಯೆಯಿಂದ ಅಮೆರಿಕ ಭಯೋತ್ಪಾದನೆ ವಿರುದ್ಧ ಸಾರಿದ್ದ ಸಮರಕ್ಕೆ ಜಯ ಸಂದಂತಾಗಿದೆ ಎಂದು ಬಣ್ಣಿಸಿದರು.
ಒಸಾಮಾ ಬಿನ್ ಲಾಡೆನ್ ಯಾವುದೇ ದೊಡ್ಡ ವ್ಯಕ್ತಿಯಲ್ಲ. ಆತ ಪ್ರಪಂಚದ ಅತೀ ಹಿನ ರಕ್ತ ಪಿಪಾಸು ಆಗಿದ್ದ. ಆ ನಿಟ್ಟಿನಲ್ಲಿ ಲಾಡೆನ್ ಹತ್ಯೆ ಐತಿಹಾಸಿಕ ದಿನ ಎಂದು ಈ ಸಂದರ್ಭದಲ್ಲಿ ಹೇಳಿದರು. ಅಷ್ಟೇ ಅಲ್ಲ ಭಯೋತ್ಪಾದನೆ ವಿರುದ್ಧದ ತಮ್ಮ ಹೋರಾಟ ಎಂದಿನಂತೆ ನಿರಂತರವಾಗಿ ಮುಂದುವರಿಯಲಿದೆ ಎಂದು ತಿಳಿಸಿದರು.