ವಿಶ್ವದ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಒಸಾಮಾ ಬಿನ್ ಲಾಡೆನ್‌ರನ್ನು ಇಸ್ಲಾಮಾಬಾದ್‌ನ ಹೊರವಲಯದಲ್ಲಿ ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಹತ್ಯೆ ಮಾಡಲಾಗಿದೆ ಎಂದು ಘೋಷಿಸಿರುವ ಬೆನ್ನಲ್ಲೇ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ವಿಶ್ವದೆಲ್ಲೆಡೆ ಪ್ರವಾಸ ಮಾಡುವ ಸಂದರ್ಭದಲ್ಲಿ ಅಮೆರಿಕಾ ಪ್ರಜೆಗಳು ಅತೀವ ಜಾಗರೂಕತೆಯಿಂದಿರಬೇಕು ಎಂದು ಎಚ್ಚರಿಸಿದ್ದಾರೆ.
ಲಾಡೆನ್ ಹತ್ಯೆ ಹಿನ್ನಲೆಯಲ್ಲಿ ಅದರಲ್ಲೂ ಪ್ರಮುಖವಾಗಿ ಪಾಕಿಸ್ತಾನದಲ್ಲಿರುವ ಅಮೆರಿಕಾ ಪ್ರಜೆಗಳು ಅತೀವ ಜಾಗರೂಕತೆ ವಹಿಸುವಂತೆ ಎಚ್ಚರಿಸಿದ್ದಾರೆ.
ಲಾಡೆನ್ ಹತ್ಯೆ ಹಿನ್ನಲೆಯಲ್ಲಿ ಇದೀಗಲೇ ಅಮೆರಿಕಾದಲ್ಲಿ ಹೈ ಎಲರ್ಟ್ ಘೋಷಿಸಲಾಗಿದೆ. ಅಲ್-ಖೈದಾ ಭಯೋತ್ಪಾದನಾ ಸಂಘಟನೆಯಿಂದ ಪ್ರತಿ ದಾಳಿ ನಡೆಯುವ ಸಾಧ್ಯತೆಯ ಬಗ್ಗೆಯೂ ಅತೀವ ಎಚ್ಚರ ವಹಿಸಲಾಗುತ್ತಿದೆ.
ಅಮೆರಿಕಾದಲ್ಲಿ ಹರ್ಷೋದ್ಗಾರ... ಈ ನಡುವೆ ಲಾಡೆನ್ ಹತ್ಯೆ ವಿಚಾರವನ್ನು ಬರಾಕ್ ಒಬಾಮಾ ಘೋಷಿಸುತ್ತಿದ್ದಂತೆಯೇ ಶ್ವೇತಭವನದ ಎದುರಗಡೆ ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಅಮೆರಿಕಾ ಪ್ರಜೆಗಳು 'ಯುಎಸ್ಎ ಯುಎಸ್‌ಎ' ಎಂದು ಘೋಷಣೆ ಕೂಗಿ ಹರ್ಷೋದ್ಗಾರ ಆಚರಿಸಿದರು.
ಒಸಾಮಾ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರಜೆಗಳು ವಲ್ಡ್ ಟ್ರೇಡ್ ಸೆಂಟರ್‌ಗೆ ದಾಳಿ ನಡೆದ ಹತ್ತು ವರ್ಷಗಳ ನಂತರ ಜಯ ಸಿಕ್ಕಿದೆ ಎಂದು ಘೋಷಣೆ ಕೂಗಿದರು.
ಬ್ರಿಟನ್ ಪ್ರಧಾನಿ ಅಭಿನಂದನೆ... ಮತ್ತೊಂದೆಡೆ ಅಮೆರಿಕಾ ಸಾಧನೆಯನ್ನು ಶ್ಲಾಘಿಸಿರುವ ಬ್ರಿಟನ್ ಪ್ರಧಾನ ಮಂತ್ರಿ ಡೇವಿಡ್ ಕ್ಯಾಮರೂನ್, ಇದರಿಂದ ವಿಶ್ವದ ಜನತೆಯು ನಿರಾಳತೆ ಅನುಭವಿಸುವಂತಾಗಿದೆ ಎಂದರು.