ಅಮೆರಿಕಾ ನಡೆಸಿರುವ ಕಾರ್ಯಾಚರಣೆಯಲ್ಲಿ ಅಲ್-ಖೈದಾ ಪ್ರಮುಖ ಒಸಾಮಾ ಬಿನ್ ಲಾಡೆನ್ ಹತ್ಯೆಗೀಡಾಗಿರುವ ಹಿನ್ನಲೆಯಲ್ಲಿ ಅಲ್ ಖೈದಾದ ಉತ್ತರಾಧಿಕಾರಿಯಾಗಿ ಎರಡನೇ ಕಮಾಂಡರ್ ಈಜಿಪ್ಟ್ ಮೂಲದ ಡಾಕ್ಟರ್ ಹಾಗೂ ಶಸ್ತ್ರ ಚಿಕಿತ್ಸಕ ಐಮನ್ ಅಲ್-ಜವಾಹಿರಿ ನೇಮಕಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ವರದಿ ಮಾಡಿವೆ.
ಜಾಗತಿಕವಾಗಿ ಕಂಟಕಪ್ರಾಯವಾಗಿದ್ದ ಅಲ್‌ಖೈದಾ ಹಾಗೂ ಲಾಡೆನ್‌ನ ಎಲ್ಲ ಭಯೋತ್ಪಾದನೆ ಚಟುವಟಿಕೆಗಳ ಹಿಂದೆ ಜವಾಹಿರಿ ಮಾಸ್ಟರ್ ಮೈಂಡ್ ಅಡಗಿತ್ತು ಎಂದು ಹೇಳಲಾಗುತ್ತಿದೆ.
ಇತ್ತೀಚೆಗಷ್ಟೇ ಲಿಬಿಯಾದಲ್ಲೂ ಅಮೆರಿಕಾ ಹಾಗೂ ನ್ಯಾಟೋ ಪಡೆಗಳ ವಿರುದ್ಧ ಹೋರಾಡಲು ಮುಸ್ಲಿಂ ಜನತೆಗೆ ಜವಾಹಿರಿ ಕರೆ ನೀಡಿದ್ದ ಎಂದು ಗುಪ್ತಚರ ಇಲಾಖೆ ವರದಿ ಮಾಡಿವೆ.
ಎಫ್‌ಬಿಐ ಬಿಡುಗಡೆ ಮಾಡಿರುವ 'ಮೋಸ್ಟ್ ವಾಂಟೆಡ್ ಟೆರರಿಸ್ಟ್' ಪಟ್ಟಿಯಲ್ಲಿ ಲಾಡೆನ್ ನಂತರ ಜವಾಹಿರಿ ಸ್ಥಾನ ಪಡೆದಿದ್ದ. 2001ರಲ್ಲಿ ವರ್ಲ್ಡ್ ಟ್ರೆಂಡ್ ಸೆಂಟರ್‌ಗೆ ದಾಳಿ ನಡೆದ ಬೆನ್ನಲ್ಲಿ ಅಫಘಾನಿಸ್ತಾನ ಮೇಲೆ ಅಮೆರಿಕಾ ಪ್ರತಿ ದಾಳಿ ನಡೆಸಿದ ಸಂದರ್ಭದಲ್ಲಿ ಇಬ್ಬರೂ ತಲೆ ಮರೆಸಿಕೊಂಡಿದ್ದರು.
ಆದರೆ ಭಾನುವಾರ ಪಾಕಿಸ್ತಾನದಲ್ಲಿ ಲಾಡೆನ್ ಹತ್ಯೆ ನಡೆದಿದೆ ಎಂದು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಘೋಷಿಸಿದ್ದರೂ ಜವಾಹಿರಿ ಪತ್ತೆಯಾಗಿಲ್ಲ. ಈ ಹಿನ್ನಲೆಯಲ್ಲಿ ಅಲ್-ಖೈದಾ ಕಮಾಂಡರ್ ಸ್ಥಾನವನ್ನು ಜವಾಹಿರಿ ವಹಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.