ಲಾಡೆನ್ ಹತ್ಯೆ ಸುಳ್ಳು;ಯುಎಸ್ ವಿರುದ್ಧ ಪಾಕ್ ಪ್ರಜೆಗಳ ಆಕ್ರೋಶ
ಇಸ್ಲಾಮಾಬಾದ್, ಮಂಗಳವಾರ, 3 ಮೇ 2011( 09:32 IST )
ನಾನು ಈ ವಿಷಯ ಸತ್ಯ ಎಂದು ನಂಬಲಾರೆ...ಇದೊಂದು ಅಮೆರಿಕದ ಗಿಮಿಕ್...ಇದು ಅಲ್ ಖಾಯಿದಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಒಸಾಬಾ ಬಿನ್ ಲಾಡೆನ್‌ನನ್ನು ಅಮೆರಿಕ ಸೇನಾ ಪಡೆ ಹತ್ಯೆಗೈದಿದೆ ಎಂಬ ಸುದ್ದಿ ಬಿತ್ತರವಾದ ನಂತರ ಪಾಕಿಸ್ತಾನಿಗರು ಟ್ವಿಟರ್, ಫೇಸ್‌ಬುಕ್‌ನಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು. ಅದರಲ್ಲೂ ಬಹುತೇಕ ಮಂದಿ ಪಾಕಿಸ್ತಾನದ ನೆಲದಲ್ಲಿ ಲಾಡೆನ್‌ನನ್ನು ಕೊಂದಿರುವುದಕ್ಕೆ ಅಮೆರಿಕ ವಿರುದ್ಧ ಕಿಡಿಕಾರಿದ್ದಾರೆ.
ಲಾಡೆನ್ ಹತ್ಯೆ ಸುದ್ದಿಯನ್ನು ನಂಬಲು ತಯಾರಿಲ್ಲದ ಕೆಲವು ಪಾಕಿಸ್ತಾನಿಯರು, ಆತನ ವಿರುದ್ಧ ನಡೆಸಿದ ದಾಳಿಯ ಸಂದರ್ಭದ ಕುರಿತೇ ಗಂಭೀರವಾಗಿ ಪ್ರಶ್ನಿಸಿದ್ದಾರೆ. ಅಮೆರಿಕದಲ್ಲಿ ಅಧ್ಯಕ್ಷ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ರೀತಿ ಸುದ್ದಿ ಹಬ್ಬಿಸಲಾಗಿದೆ ಎಂದು ಫೇಸ್‌ಬುಕ್‌ನಲ್ಲಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಜಗತ್ತಿನ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕ ನೇತೃತ್ವದ ಸೇನಾಪಡೆ ಭಾನುವಾರ ರಾತ್ರಿ ಇಸ್ಲಾಮಾಬಾದ್‌ನ ಅಬೋಟಾಬಾದ್‌ನಲ್ಲಿ ದಾಳಿ ನಡೆಸಿ ಹತ್ಯೆಗೈದಿತ್ತು. ನಂತರ ಲಾಡೆನ್ ಹತ್ಯೆ ಬಗ್ಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅಧಿಕೃತವಾಗಿ ಘೋಷಿಸಿದ್ದರು.
ಲಾಡೆನ್ ಹತ್ಯೆಯ ಸುದ್ದಿ ಟಿವಿ ಚಾನೆಲ್‌ಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ ಅಮೆರಿಕದಲ್ಲಿ ಸಂಭ್ರಮಾಚರಣೆ ನಡೆದರೆ, ಪಾಕಿಸ್ತಾನದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 'ನನ್ನ ಆಲೋಚನೆ ಪ್ರಕಾರ ಲಾಡೆನ್ ಹತ್ಯೆ ಸುದ್ದಿ ನಿಜವಲ್ಲ. ಯಾಕೆಂದರೆ ಮುಂದಿನ ವರ್ಷ ಅಮೆರಿಕದ ಅಧ್ಯಕ್ಷ ಚುನಾವಣೆ ನಡೆಯಲಿದೆ. ಹಾಗಾಗಿ ಈ ಸುದ್ದಿ ಬರಾಕ್ ಒಬಾಮಾಗೆ ಗೆಲುವು ಸಾಧಿಸಲು ನೆರವಾಗಲಿದೆ ಅಷ್ಟೇ' ಎಂದು ಪಾಕ್ ಟಿವಿ ಚಾನೆಲ್ ನಿರೂಪಕ ಫೈಸಲ್ ರಾಜಾ ಫೇಸ್‌ಬುಕ್‌ನಲ್ಲಿ ತಿಳಿಸಿದ್ದಾರೆ.
ಅದೇ ರೀತಿ ಒಸಾಮಾ ಬಿನ್ ಲಾಡೆನ್ ಹತ್ಯೆಯ ಸುದ್ದಿ ಶುದ್ಧ ಸುಳ್ಳು ಎಂದು ತೆಹ್ರೀಕ್ ಇ ತಾಲಿಬಾನ್ ಕೂಡ ಪ್ರತಿಕ್ರಿಯೆ ನೀಡಿದೆ. ಪೇಶಾವರದ ರೆಹಾನ್ ಅವಾನ್ ಎಂಬಾತ, ಥ್ಯಾಂಕ್ ಯೂ ಮಿಸ್ಟರ್ ಬರಾಕ್ ಒಬಾಮಾ, ಆದರೆ ಲಾಡೆನ್ ಸಾವಿನ ಬಗ್ಗೆ ಪುರಾವೆ ನೀಡಿ ಎಂದು ಸವಾಲು ಹಾಕಿದ್ದಾನೆ. ಆತನ ಮೃತದೇಹ ಸಾರ್ವಜನಿಕ ಪ್ರದರ್ಶನಕ್ಕೆ ಇಡಿ. ಅಲ್ಲದೇ ಈ ಕಾರ್ಯಾಚರಣೆ ಎಲ್ಲಿ ನಡೆಸಲಾಯಿತು. ಯಾರೆಲ್ಲ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬ ವಿವರ ನೀಡಿ ಎಂಬುದಾಗಿಯೂ ತಿಳಿಸಿದ್ದಾನೆ.