ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಾಡೆನ್ ಹತ್ಯೆಗೆ ಪ್ರತೀಕಾರ-ಫಸ್ಟ್ ಟಾರ್ಗೆಟ್ ಪಾಕ್: ತಾಲಿಬಾನ್ (Pakistan | Zardari | al Qaeda | Osama bin Laden | US | Islamabad)
ಲಾಡೆನ್ ಹತ್ಯೆಗೆ ಪ್ರತೀಕಾರ-ಫಸ್ಟ್ ಟಾರ್ಗೆಟ್ ಪಾಕ್: ತಾಲಿಬಾನ್
ಇಸ್ಲಾಮಾಬಾದ್, ಮಂಗಳವಾರ, 3 ಮೇ 2011( 15:18 IST )
PR
ಪಾಕಿಸ್ತಾನದ ಅಬೋಟೋಬಾದ್‌ನಲ್ಲಿ ಅಲ್ ಖಾಯಿದಾ ವರಿಷ್ಠ ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕ ವಿಶೇಷ ಸೇನಾ ಪಡೆ ಹತ್ಯೆಗೈದಿರುವುದಕ್ಕೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಗುಡುಗಿರುವ ಪಾಕಿಸ್ತಾನದ ತಾಲಿಬಾನ್, ತಮ್ಮ ಮೊದಲ ಟಾರ್ಗೆಟ್ ಪಾಕಿಸ್ತಾನ ನಂತರ ಅಮೆರಿಕ ಎಂಬುದಾಗಿಯೂ ಎಚ್ಚರಿಸಿದೆ.
ರಹಸ್ಯ ಸ್ಥಳದಿಂದ ಪಾಕಿಸ್ತಾನದ ಮಾಧ್ಯಮಗಳಿಗೆ ಆಡಿಯೋ ಸಂದೇಶ ರವಾನಿಸಿರುವ ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ್ ಸಂಘಟನೆಯ ವಕ್ತಾರ ಅಶಾನುಲ್ಲಾ ಅಶಾನ್, ಲಾಡೆನ್ ಸಾವನ್ನು ಖಚಿತಪಡಿಸಿದ್ದಾನೆ. ಜಗತ್ತಿನ ಮೋಸ್ಟ್ ವಾಂಟೆಡ್ ವ್ಯಕ್ತಿಯಾಗಿದ್ದ ಲಾಡೆನ್‌ನನ್ನು ಅಮೆರಿಕ ಪಡೆ ಹತ್ಯೆಗೈದಿದೆ. ಅಲ್ಲದೇ ನಾವು ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿಯೂ ತಿಳಿಸಿದ್ದಾನೆ.
ಆ ನಿಟ್ಟಿನಲ್ಲಿ ನಮ್ಮ ಮೊದಲ ಟಾರ್ಗೆಟ್ ಪಾಕಿಸ್ತಾನವಾಗಿದ್ದು, ನಂತರ ಅಮೆರಿಕ ಎಂದು ಅಶಾನ್ ಆಡಿಯೋ ಸಂದೇಶದಲ್ಲಿ ಗುಡುಗಿದ್ದು, ಪಾಕಿಸ್ತಾನದ ಜನಪ್ರತಿನಿಧಿಗಳು ತಮ್ಮ ಹಿಟ್ ಲಿಸ್ಟ್‌ನಲ್ಲಿ ಇದ್ದಿರುವುದಾಗಿ ಹೇಳಿದ್ದಾನೆ.
ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕದ ವಿಶೇಷ ಸೇನಾಪಡೆ ಹತ್ಯೆಗೈದಿರುವುದಾಗಿ ಅಮೆರಿಕ ಘೋಷಿಸಿದ ನಂತರ ಅಶಾನ್ ಈ ಎಚ್ಚರಿಕೆಯ ಸಂದೇಶ ರವಾನಿಸಿದ್ದು, ಪಾಕಿಸ್ತಾನದ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಹಾಗೂ ಪಾಕಿಸ್ತಾನದ ಆರ್ಮಿ ಕೂಡ ತಮ್ಮ ಮೊದಲ ಟಾರ್ಗೆಟ್ ಎಂದು ವಿವರಿಸಿದ್ದಾನೆ.
ಅಲ್ಲದೇ ಅಲ್ ಖಾಯಿದಾ ವರಿಷ್ಠ ಒಸಾಮಾ ಬಿನ್ ಲಾಡೆನ್‌ನನ್ನು ಹತ್ಯೆಗೈದಿರುವುದಕ್ಕೆ ಅಮೆರಿಕ ಸಂತಸಪಡಬೇಕಾಗಿಲ್ಲ. ಯಾಕೆಂದರೆ ಆತನ ಪತ್ತೆಗಾಗಿ ಸುಮಾರು ಹತ್ತು ವರ್ಷಗಳ ಕಾಲ ಅಲೆದಾಡಿರುವುದಾಗಿಯೂ ಆಡಿಯೋ ಸಂದೇಶದಲ್ಲಿ ಆಶಾನ್ ಟೀಕಿಸಿದ್ದಾನೆ.
ಈಗಾಗಲೇ ನಾವು 2007ರಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋವನ್ನು ಹತ್ಯೆಗೈದಿದ್ದೇವೆ. ಆಕೆಯ ಹತ್ಯೆಗಾಗಿ ಮೂರು ತಿಂಗಳ ಕಾಲ ವ್ಯವಸ್ಥಿತ ಸಂಚು ರೂಪಿಸಲಾಗಿತ್ತು. ಅದರಂತೆ ನಾವು ನಮ್ಮ ಕಾರ್ಯವನ್ನು ಸಾಧಿಸಿದ್ದೇವೆ. ಆದರೆ ಲಾಡೆನ್ ಹತ್ಯೆಗೆ ಅಮೆರಿಕಕ್ಕೆ ಹತ್ತು ವರ್ಷ ಬೇಕಾಯಿತು ಎಂದು ವ್ಯಂಗ್ಯವಾಡಿದ್ದಾನೆ.