'ತನ್ನ ಮಕ್ಕಳು ಯಾವುದೇ ಕಾರಣಕ್ಕೂ ಅಲ್ ಖಾಯಿದಾ ಸಂಘಟನೆಯನ್ನು ಸೇರಬಾರದು'...ಇದು ಅಲ್ ಖಾಯಿದಾ ಸ್ಥಾಪಕ ಒಸಾಮಾ ಬಿನ್ ಲಾಡೆನ್ ಬರೆದಿಟ್ಟ ಉಯಿಲು!
ಲಾಡೆನ್ ಬರೆದಿಟ್ಟ ಉಯಿಲು ಬಗ್ಗೆ ಕುವೈಟ್ ಮೂಲದ ಅಲ್ ಅನಾಬಾ ದೈನಿಕ ವರದಿ ಮಾಡಿದೆ. ನಾಲ್ಕು ಪುಟಗಳ ಈ ಉಯಿಲನ್ನು ಲಾಡೆನ್ 2001 ಡಿಸೆಂಬರ್ 14ರಂದು ಅಫ್ಘಾನಿಸ್ತಾನದಲ್ಲಿದ್ದ ಸಂದರ್ಭದಲ್ಲಿ ಈ ಉಯಿಲು ಬರೆದಿಟ್ಟಿರುವುದಾಗಿ ವರದಿ ವಿವರಿಸಿದೆ.
ಅಮೆರಿಕ ವಿಶೇಷ ಸೇನಾಪಡೆ ಮೇ 1ರಂದು ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ದಿಢೀರ್ ದಾಳಿ ನಡೆಸುವ ಮೂಲಕ ಲಾಡೆನ್‌ನನ್ನು ಹತ್ಯೆಗೈದಿತ್ತು. ಇದೀಗ ಲಾಡೆನ್ ಕುರಿತು ಒಂದೊಂದೇ ವಿವರಗಳು ಹೊರಬೀಳತೊಡಗಿದ್ದು, ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ತನ್ನ ಹತ್ಯೆಗೂ ಮುನ್ನ ಬರೆದಿಟ್ಟಿದ್ದ ಮರಣ ಶಾಸನದಲ್ಲಿ ಲಾಡೆನ್, ತನ್ನ ಮಕ್ಕಳು ಯಾವುದೇ ಕಾರಣಕ್ಕೂ ಅಲ್ ಖಾಯಿದಾ ಸಂಘಟನೆ ಸೇರ್ಪಡೆಗೊಳ್ಳಬಾರದು. ಅಲ್ಲದೇ ತನ್ನ ಪತ್ನಿಯರು ಮರು ಮದುವೆಯಾಗದಂತೆ ತಾಕೀತು ಮಾಡಿರುವುದಾಗಿಯೂ ವರದಿ ವಿವರಿಸಿದೆ.
ಮಕ್ಕಳು ಅಲ್ ಖಾಯಿದಾ ಸಂಘಟನೆಯ ಮುಂಚೂಣಿ ನಾಯಕರಾಗುವುದಾಗಲಿ, ಪತ್ನಿಯರು ಯುದ್ಧದಲ್ಲಿ ಭಾಗವಹಿಸದಂತೆ ಲಾಡೆನ್ ಉಯಿಲಿನಲ್ಲಿ ಸೂಚನೆ ನೀಡಿರುವುದಾಗಿ ಪತ್ರಿಕೆ ಹೇಳಿದೆ.