ಅಲ್ ಖಾಯಿದಾ ಸಂಸ್ಥಾಪಕ, ಜಗತ್ತಿನ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಒಸಾಮಾ ಬಿನ್ ಲಾಡೆನ್ ಬಗ್ಗೆ ಸುಳಿವು ಕೊಟ್ಟಿದ್ದೇ ಆತನ ನಿಕವರ್ತಿ, ಸಂಘಟನೆಯ ಎರಡನೇ ನಾಯಕನಾಗಿದ್ದ ಐಮನ್ ಅಲ್ ಜವಾಹಿರಿ ಎಂಬುದಾಗಿ ಸೌದಿ ಅರೇಬಿಯಾದ ದೈನಿಕವೊಂದು ವರದಿ ಮಾಡಿದೆ.
ಅಲ್ ಖಾಯಿದಾ ಸಂಘಟನೆಯ ಮುಖ್ಯಸ್ಥನಾಗುವ ಕುರಿತು ಜವಾಹಿರಿ ಮತ್ತು ಲಾಡೆನ್ ನಡುವೆ ಆಂತರಿಕ ಕಲಹ ನಡೆದಿತ್ತು ಎನ್ನಲಾಗಿದೆ. ಅಷ್ಟೇ ಅಲ್ಲ ಲಾಡೆನ್ ಪರವಾಗಿ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿದ್ದ ಕೊರಿಯರ್ ಸರ್ವಿಸ್ ವ್ಯಕ್ತಿ ಕೂಡ ಉಭಯ ನಾಯಕರಿಗೂ ನಿಷ್ಠೆಯಿಂದ ಇದ್ದ ಎಂದು ಅಲ್ ವಾಟಾನ್ ಪತ್ರಿಕೆ ಮೂಲವೊಂದು ಹೇಳಿರುವುದಾಗಿ ತಿಳಿಸಿದೆ.
2004ರಲ್ಲಿ ಒಸಾಮಾ ಬಿನ್ ಲಾಡೆನ್ ತೀವ್ರ ಅನಾರೋಗ್ಯಕ್ಕೆ ತುತ್ತಾದ ನಂತರ ಅಲ್ ಖಾಯಿದಾ ಸಂಘಟನೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಇಚ್ಛೆಯನ್ನು ಜವಾಹಿರಿ ಹೊಂದಿದ್ದ ಎನ್ನಲಾಗಿದೆ. ಆದರೆ ತಾನು ಜೀವಂತವಾಗಿರುವವರೆಗೆ ಅಲ್ ಖಾಯಿದಾ ಸಂಘಟನೆ ಮುಖ್ಯಸ್ಥನಾಗಲು ಲಾಡೆನ್ ಅವಕಾಶ ನೀಡದಿರುವುದೇ ಆತನಿಗೆ ವಿಶ್ವಾಸದ್ರೋಹ ಎಸಗಲು ಪ್ರಮುಖ ಕಾರಣ ಎಂದು ಪತ್ರಿಕೆ ವಿವರಿಸಿದೆ.
ಕೊರಿಯರ್ ವ್ಯಕ್ತಿ ಪಾಕಿಸ್ತಾನಿ ವಿನಃ, ಕುವೈಟ್ ಮೂಲದವ ಅಲ್ಲ. ಆತನಿಗೆ ಇಬ್ಬರ ನಡುವಿನ ಆಂತರಿಕ ಕಲಹದ ಗುಟ್ಟು ಕೂಡ ತಿಳಿದಿತ್ತು ಎಂದು ಪತ್ರಿಕೆ ಹೇಳಿದೆ. ಈ ತಿಕ್ಕಾಟದ ಸಂದರ್ಭದಲ್ಲಿಯೇ ಲಾಡೆನ್ ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಭಾಗದಿಂದ ಇಸ್ಲಾಮಾಬಾದ್ ಅಬೋಟಾಬಾದ್‌ಗೆ ತನ್ನ ವಾಸ್ತವ್ಯ ಬದಲಾಯಿಸಿದ್ದ.
ಅಂತೂ ಅಲ್ ಖಾಯಿದಾ ಸಂಘಟನೆಯ ಸಾರಥ್ಯ ವಹಿಸುವ ಬಲವಾದ ಇಚ್ಛೆ ಹೊಂದಿದ್ದ ಜವಾಹಿರಿಯೇ ಲಾಡೆನ್ ಅಡಗುತಾಣದ ಬಗ್ಗೆ ಮಾಹಿತಿ ನೀಡಿರುವುದಾಗಿ ಪತ್ರಿಕೆ ಆರೋಪಿಸಿದೆ. ಏತನ್ಮಧ್ಯೆ, ಅಲ್ ಖಾಯಿದಾ ಸಂಘಟನೆಗೆ ಇಂಟರ್ನೆಟ್ ಲಾಡೆನ್ ಎಂದೇ ಹೆಸರಾಗಿರುವ ಅನ್ವರ್ ಅಲ್ ಅವ್ಲಾಕಿ ಮುಖ್ಯಸ್ಥನಾಗಲಿದ್ದಾನೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಆ ನಿಟ್ಟಿನಲ್ಲಿ ಜವಾಹಿರಿಯ ಸ್ಥಾನ ಏನೆಂಬುದು ಕುತೂಹಲ ಹುಟ್ಟಿಸಿದೆ.