ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಾಡೆನ್ ಪತ್ನಿಯರನ್ನು ನಮಗೊಪ್ಪಿಸಿ: ಪಾಕ್‌ಗೆ ಅಮೆರಿಕ (Osama bin Laden | Qaida | America | Pakistan | United States | Afghanistan)
ಲಾಡೆನ್ ಪತ್ನಿಯರನ್ನು ನಮಗೊಪ್ಪಿಸಿ: ಪಾಕ್‌ಗೆ ಅಮೆರಿಕ
ಇಸ್ಲಾಮಾಬಾದ್, ಸೋಮವಾರ, 9 ಮೇ 2011( 15:54 IST )
ಹತ್ಯೆಯಾದ ಅಲ್ ಖಾಯಿದಾ ವರಿಷ್ಠ ಒಸಾಮಾ ಬಿನ್ ಲಾಡೆನ್‌ನ ಮೂವರು ಪತ್ನಿಯರನ್ನು ತಮಗೊಪ್ಪಿಸುವಂತೆ ಅಮೆರಿಕ ಪಾಕಿಸ್ತಾನಕ್ಕೆ ಕೋರಿದ್ದು, ಅಲ್ ಖಾಯಿದಾ ಮುಖಂಡನ ಜತೆ ಪಾಕ್ ಗುಪ್ತಚರ ಇಲಾಖೆಯ ಯಾವೆಲ್ಲ ಅಧಿಕಾರಿಗಳು ಆತನ ಸಂಪರ್ಕದಲ್ಲಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಬೇಕಾಗಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏತನ್ಮಧ್ಯೆ ಲಾಡೆನ್ ಪತ್ನಿಯರ ವಿಚಾರಣೆಗೆ ಅಮೆರಿಕಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಲ್ಲ ಎಂದು ಯೆಮೆನ್‌ನಲ್ಲಿರುವ ಪಾಕಿಸ್ತಾನದ ಉಪ ರಾಯಭಾರಿ ಖಾನ್ ತಿಳಿಸಿದ್ದಾರೆ.
ಒಸಾಮಾ ಬಿನ್ ಲಾಡೆನ್ ಕುರಿತು ಇನ್ನೂ ಸಾಕಷ್ಟು ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ನಾವು ಲಾಡೆನ್ ಪತ್ನಿಯರ ವಿಚಾರಣೆ ನಡೆಸುವುದು ಅಗತ್ಯವಾಗಿದೆ. ಹಾಗಾಗಿ ಪಾಕ್ ಅಧಿಕಾರಿಗಳ ವಶದಲ್ಲಿರುವ ಲಾಡೆನ್ ಮೂವರು ಪತ್ನಿಯರನ್ನು ತಮ್ಮ ವಶಕ್ಕೆ ನೀಡುವಂತೆ ಅಮೆರಿಕ ಮನವಿ ಮಾಡಿಕೊಂಡಿದೆ.
ಮೇ 1ರ ರಾತ್ರಿ ಅಮೆರಿಕದ ವಿಶೇಷ ಸೇನಾಪಡೆ ಇಸ್ಲಾಮಾಬಾದ್ ಅಬೋಟಾಬಾದ್‌ನಲ್ಲಿರುವ ಐಶಾರಾಮಿ ಮನೆ ಮೇಲೆ ದಿಢೀರ್ ದಾಳಿ ನಡೆಸಿ ಹತ್ಯೆ ನಡೆಸಿತ್ತು. ತದನಂತರ ಪಾಕ್ ಮಿಲಿಟರಿ ಪಡೆ ಆತನ ಪತ್ನಿಯರು, ಮಕ್ಕಳನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.
ಆದರೆ ಅಮೆರಿಕದ ಈ ಕೋರಿಕೆ ಬಗ್ಗೆ ಪಾಕಿಸ್ತಾನದ ಮಿಲಿಟರಿ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಸುಮಾರು ಹಲವು ವರ್ಷಗಳ ಕಾಲ ಅಮೆರಿಕದ ಸಿಐಎ ಮತ್ತು ಪಾಕಿಸ್ತಾನದ ಐಎಸ್ಐ ಗುಪ್ತಚರ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸಿದ್ದವು. ಆದರೆ ಲಾಡೆನ್ ವಿರುದ್ಧ ಅಮೆರಿಕ ಪಾಕಿಸ್ತಾನಕ್ಕೆ ಯಾವುದೇ ಮಾಹಿತಿ ನೀಡದೆ ಕಾರ್ಯಾಚರಣೆ ನಡೆಸುವ ಮೂಲಕ ಪಾಕ್ ಬಣ್ಣವನ್ನು ಬಯಲು ಮಾಡಿತ್ತು.
ಆ ನೆಲೆಯಲ್ಲಿ ಲಾಡೆನ್ ಅಬೋಟಾಬಾದ್‌ನಲ್ಲಿ ವಾಸ್ತವ್ಯ ಹೂಡಿರುವ ಕುರಿತು, ಆತನಿಗೆ ಪಾಕ್ ನೆರವು ನೀಡಿರುವ ಅಂಶ ಸೇರಿದಂತೆ ಹಲವು ವಿಷಯಗಳ ಕುರಿತು ತನಿಖೆ ನಡೆಸಬೇಕಾದ ಅಗತ್ಯವಿದೆ ಎಂದು ಅಮೆರಿಕ ಹೇಳಿದೆ. ಅಬೋಟಾಬಾದ್‌ನಲ್ಲಿರುವ ಲಾಡೆನ್ ನಿವಾಸದಿಂದ ಪಾಕ್ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದೆ. ಆ ಬಗ್ಗೆಯೂ ನಮಗೆ ಮಾಹಿತಿ ಬೇಕಾಗಿದೆ ಎಂದು ತಿಳಿಸಿದೆ.