ಲಾಡೆನ್‌ಗೆ ಸಪೋರ್ಟ್- ಪಾಕ್ ಬಗ್ಗೆ ತನಿಖೆಯಾಗ್ಬೇಕು: ಒಬಾಮಾ
ವಾಷಿಂಗ್ಟನ್, ಸೋಮವಾರ, 9 ಮೇ 2011( 16:16 IST )
ಭಯೋತ್ಪಾದಕ ಸಂಘಟನೆ ಅಲ್-ಖೈದಾ ಮುಖ್ಯಸ್ಥ ಒಸಮಾ ಬಿನ್ ಲಾಡೆನ್ ಅವರಿಗೆ ಪಾಕಿಸ್ತಾನ ಸರಕಾರದ ಕೆಲವು ಮಂದಿಯೇ ಆತನಿಗೆ ನೆರವು ನೀಡಿರುವ ಶಂಕೆ ಮತ್ತಷ್ಟು ಬಲವಾಗಿದೆ. ಆ ನಿಟ್ಟಿನಲ್ಲಿ ಅಬೋಟಾಬಾದ್‌ನಲ್ಲಿ ಐಶಾರಾಮಿ ನಿವಾಸ ಕಟ್ಟಲು ಕೆಲವರು ಶಾಮೀಲಾಗಿರುವುದಾಗಿ ಆರೋಪಿಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ, ಈ ಬಗ್ಗೆ ಪಾಕ್ ಮತ್ತು ಅಮೆರಿಕ ಸೇರಿದಂತೆ ಉಭಯ ದೇಶಗಳಿಂದಲೂ ತನಿಖೆ ನಡೆಯಬೇಕಾಗಿದೆ ಎಂದು ತಿಳಿಸಿದ್ದಾರೆ.
ಮೇ 1ರಂದು ಪಾಕಿಸ್ತಾನದಲ್ಲೇ ನಡೆಸಿದ ಕಾರ್ಯಚರಣೆಯಲ್ಲಿ ಲಾಡೆನ್‌ನನ್ನು ಹತ್ಯೆಗೈಯುವಲ್ಲಿ ಅಮೆರಿಕಾ ಸೇನಾಪಡೆ ಯಶಸ್ವಿಯಾಗಿತ್ತು. ಆದರೆ ಉಗ್ರ ಲಾಡೆನ್‌ಗೆ ಪಾಕಿಸ್ತಾನ ಸರಕಾರದಿಂದಲೇ ನೆರವು ದೊರಕಿರುವ ಸಾಧ್ಯತೆಯಿದ್ದು, ಈ ಬಗ್ಗೆ ತನಿಖೆಯ ಅಗತ್ಯವಿದೆ ಎಂದು ಒಬಾಮಾ ಅಭಿಪ್ರಾಯಪಟ್ಟಿದ್ದಾರೆ.
ಪಾಕ್ ಸೇನಾಪಡೆ ನೆಲೆ ಸಮೀಪವೇ ಕಳೆದ ನಾಲ್ಕೈದು ವರ್ಷದಿಂದ ಲಾಡೆನ್ ಅವಿತಿದ್ದ ಎಂಬ ವಿಚಾರ ಬೆಳಕಿಗೆ ಬಂದಿವೆ. ಪಾಕ್ ಸರಕಾರವೇ ನೆರವು ನೀಡಿರುವ ಬಗ್ಗೆ ಶಂಕೆ ಮೂಡಿದ್ದು, ಈ ಬಗ್ಗೆ ಪಾಕಿಸ್ತಾನ ತನಿಖೆ ಕೈಗೊಳ್ಳುವ ಅಗತ್ಯವಿದೆ ಎಂದವರು ಸಿಬಿಎಸ್ ನ್ಯೂಸ್ ಚಾನೆಲ್‌ನ '60 ಮಿನಿಟ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ತಿಳಿಸಿದರು.
ಪಾಕಿಸ್ತಾನ ಸರಕಾರಿದಿಂದ ನೆರವು ದೊರಕಿರುವ ಬಗೆಗಿನ ಶಂಕೆ ಬಲವಾಗಿದೆ. ಆದರೆ ಯಾರು ಸಹಾಯ ಮಾಡಿರಬಹುದು ಎಂಬುದು ತಿಳಿದು ಬಂದಿಲ್ಲ ಎಂದು ಒಬಾಮಾ ಹೇಳಿದರು.