ನಿಕೋಸಿಯಾ (ಸೈಪ್ರಸ್), ಬುಧವಾರ, 11 ಮೇ 2011( 17:40 IST )
ಒಸಾಮಾ ಹತ್ಯೆಯ ಸೇಡು ತೀರಿಸಿಕೊಳ್ಳುವಂತೆ ಅಲ್ ಖೈದಾ ಉಗ್ರಗಾಮಿ ಸಂಘಟನೆಯು ಮುಸ್ಲಿಮರಿಗೆ ಮಗದೊಮ್ಮೆ ಕರೆ ನೀಡಿದೆಯಲ್ಲದೆ, ಬರಾಕ್ ಒಬಾಮಾ ಅವರ ಈ ಕೃತ್ಯಕ್ಕೆ 'ಅಮೆರಿಕದವರು ತಕ್ಕ ಬೆಲೆ ತೆರಲಿದ್ದಾರೆ' ಎಂದು ಎಚ್ಚರಿಸಿದೆ.
ಲಾಡೆನ್ ಹತ್ಯೆಯನ್ನು 'ದೊಡ್ಡ ಪ್ರಮಾದ' ಮತ್ತು 'ಗಂಭೀರ ಪಾಪಕೃತ್ಯ' ಎಂದು ಬಣ್ಣಿಸಿರುವ ಅಲ್‌ಖೈದಾ ಸಂಘಟನೆಯ ಪರ ಆನ್‌ಲೈನ್ ಪ್ರಚಾರ ಸಂಸ್ಥೆ ಅಲ್ ಫಜರ್ ಮೀಡಿಯಾ ಸೆಂಟರ್, ಲಾಡೆನ್‌ರನ್ನು ಕೊಲ್ಲುವ ಮೂಲಕ ಒಬಾಮಾ ಅವರು ಅಮೆರಿಕದ ಜನರಿಗೆ ಭಾರೀ ವಿಪತ್ತು ತಂದೊಡ್ಡಿದ್ದಾರೆ ಎಂದು ಎಚ್ಚರಿಕೆ ನೀಡಿರುವುದಾಗಿ ಬೇಹುಗಾರಿಕೆ ಮೇಲ್ವಿಚಾರಣಾ ಸೇವಾ ಸಂಸ್ಥೆ 'ಸೈಟ್' ತಿಳಿಸಿದೆ.
'ಹಿಂಸೆ ಹಾಗೂ ಒತ್ತಡದ ನಡುವೆಯೂ ಅಲ್ಲಾಹ್‌ಗೆ ಜಯ ದೊರೆಯುತ್ತದೆ ಮತ್ತು ಆತನ ಬೆಂಬಲ ತನಗಿದೆ ಎಂಬ ನಂಬಿಕೆಯಿಂದ ಆತ ನಗು ನಗುತ್ತಲೇ ಇದ್ದ. ಆತ ಎಂದೂ ಹಿಮ್ಮೆಟ್ಟಿರಲಿಲ್ಲ, ಅವನು ಜಿಹಾದ್‌ಗೆ ಸಿದ್ಧರಾಗುವಂತೆ ತನ್ನ ವ್ಯಕ್ತಿತ್ವ ಮತ್ತು ಹಣ ಬಲದಿಂದ ಪ್ರಚೋದಿಸುತ್ತಿದ್ದ' ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.