ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಬಂಧನದ ಆದೇಶ ಹೊರಬಿದ್ದ ಘಟನೆಯಿಂದ ಆಘಾತಗೊಂಡ ಈಜಿಪ್ಟ್‌ನ ಪದಚ್ಯುತ ಅಧ್ಯಕ್ಷ ಹೊಸ್ನಿ ಮುಬಾರಕ್ ಪತ್ನಿ ಸುಜಾನ್ನೆ ಮುಬಾರಕ್ (70) ತೀವ್ರ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಿಸಿರುವ ಘಟನೆ ನಡೆದಿದೆ.
ಸುಜಾನ್ನೆ ಮುಬಾರಕ್ ಅವರು ಹೃದಯ ಸಂಬಂಧಿ ತೊಂದರೆಯಿಂದ ಎದುರಿಸುತ್ತಿದ್ದು, ಅವರ ಸ್ಥಿತಿ ತುಂಬಾ ಚಿಂತಾಜನಕವಾಗಿರುವುದಾಗಿ ಆಸ್ಪತ್ರೆಯ ನಿರ್ದೇಶಕರು ತಿಳಿಸಿದ್ದಾರೆ. ಸುಜಾನ್ನೆ ಅವರನ್ನು ರೆಡ್ ಸೀ ರೆಸಾರ್ಟ್ ಕಮ್ಯುನಿಟಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಪತಿ ಹೊಸ್ನಿ ಮುಬಾರಕ್ ಅವರನ್ನೂ ಕೂಡ ಆಸ್ಪತ್ರೆಗೆ ಸೇರಿಸಲಾಗಿದೆ.
ಹೊಸ್ನಿ ಮುಬಾರಕ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರ ಅಧಿಕಾರಾವಧಿಯನ್ನು ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಸುಜಾನ್ನೆ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸುವಂತೆ ಶುಕ್ರವಾರ ಆದೇಶ ಹೊರಬಿದ್ದ ಬೆನ್ನಲ್ಲೇ ಈ ಘಟನೆ ನಡೆದಿದೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.
ಹಲವು ವರ್ಷಗಳ ಕಾಲ ಈಜಿಪ್ಟ್ ಅನ್ನು ಆಳಿದ್ದ ಹೊಸ್ನಿ ಮುಬಾರಕ್ ವಿರುದ್ಧ ಜನ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಕೊನೆಗೂ ಪ್ರತಿಭಟನೆಗೆ ಮಣಿದಿದ್ದ ಹೊಸ್ನಿ ಮುಬಾರಕ್ ಅಧ್ಯಕ್ಷ ಗಾದಿಯಿಂದ ಕೆಳಗಿಳಿದಿದ್ದರು.
ಸ್ವಲ್ಪ ಕಾಲ ಗುಣಮುಖರಾಗುವವರೆಗೆ ಸುಜಾನ್ನೆ ಮುಬಾರಕ್ ಅವರು ಆಸ್ಪತ್ರೆಯಲ್ಲಿಯೇ ಇರುತ್ತಾರೆ. ಆದರೆ ಅವರನ್ನು ಕೈರೋದ ಮಹಿಳಾ ಕಾರಾಗೃಹಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇರುವುದಾಗಿ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.