ಅಲ್‌ಖೈದಾ ಮುಖಂಡ ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕ ಕಮಾಂಡೋ ಪಡೆಗಳು ಅಬೋತಾಬಾದ್‌ನಲ್ಲಿ ಹತ್ಯೆಗೈದ ನಂತರ ಪಾಕಿಸ್ತಾನದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ.51 ಮಂದಿ ಲಾಡೆನ್ ಹತ್ಯೆಗೆ ದುಃಖ ವ್ಯಕ್ತಪಡಿಸಿದ್ದಾರೆ. ಮೂರನೇ ಒಂದು ಭಾಗ ಜನರು ತಾವು ಈ ಕುರಿತು ತಲೆಕೆಡಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.
ಮೇ 2ರಂದು ಲಾಡೆನ್ ಹತನಾದ ನಂತರ ಮೇ 7ರಿಂದ 10ರ ವರೆಗೆ ಪಾಕಿಸ್ತಾನದಾದ್ಯಂತ ಜನರ ಸಮೀಕ್ಷೆ ನಡೆಸಲಾಗಿತ್ತು. ಈ ಪೈಕಿ ಕೇವಲ ಶೇ.11ರಷ್ಟು ಜನರು ಅಲ್‌ಖೈದಾ ಮುಖಂಡ ಲಾಡೆನ್ ಹತ್ಯೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಶೇ. 44 ಜನರು ಲಾಡೆನ್ ಹುತಾತ್ಮ ಎಂದು ಹೇಳಿದರೆ, ಶೇ. 28 ಜನರು ಆತ ಕಾನೂನು ವಿರೋಧಿಯಾಗಿದ್ದರಿಂದ ಆತನನ್ನು ಹತ್ಯೆ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶೇ.49 ಜನರು ಲಾಡೆನ್ ಹತ್ಯೆಗೆ ಸಂಬಂಧಿಸಿದ ಕಾರ್ಯಾಚರಣೆ ಅಮೆರಿಕ ನಡೆಸಿದ ನಾಟಕ ಎಂದು ಹೇಳಿದರೆ, ಶೇ.26 ಜನರು ಈ ಕುರಿತು ತಾವು ಕೇಳಿದ್ದೇ ನಿಜ ಎಂದು ನಂಬಿದ್ದಾರೆ. ಶೇ.25 ಜನರು ಈ ಬಗ್ಗೆ ಖಚಿತವಾಗಿ ಏನನ್ನೂ ಹೇಳಿಲ್ಲ.
ಬಹುತೇಕ ಜನರು ಅಮೆರಿಕ ಪಡೆಗಳು ಲಾಡೆನ್ ವಿರುದ್ಧ ನಡೆಸಿದ ದಾಳಿಗೆ ಪಾಕಿಸ್ತಾನಿ ಅಧಿಕಾರಿಗಳು ಸಹಕರಿಸಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.
ಶೇ.57 ಜನರು ಅಮೆರಿಕ ಪಡೆಗಳ ದಾಳಿಗೆ ಪಾಕಿಸ್ತಾನ ಸರಕಾರ ಸಮ್ಮತಿಸಿತ್ತು ಎಂದು ಅಭಿಪ್ರಾಯಪಟ್ಟರೆ, ಶೇ.48 ಜನರು ಪಾಕ್ ಸೇನೆ ಸಮ್ಮತಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಲಾಡೆನ್ ಹತ್ಯೆಯ ನಂತರ ಅಮೆರಿಕ ಪಡೆಗಳು ಆಫ್ಘಾನಿಸ್ತಾನದಿಂದ ಹಿಂದೆ ಹೋಗಲಿವೆ ಎಂದು ಶೇ.30ರಷ್ಟು ಜನರು ನಂಬಿದ್ದಾರೆ. ಶೇ.51 ಜನರು ಅಮೆರಿಕ ಪಡೆಗಳು ಆಫ್ಘಾನಿಸ್ತಾನದಲ್ಲಿ ಯುದ್ಧವನ್ನು ಮುಂದುವರಿಸಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಹುತೇಕ ಪಾಕಿಸ್ತಾನಿಯರು (ಶೇ.42) ತಮ್ಮ ದೇಶದಲ್ಲಿ ಉಗ್ರಗಾಮಿ ಚಟುವಟಿಕೆ ಹೆಚ್ಚಳವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಶೇ. 34 ಮಂದಿ ಯಥಾಸ್ಥಿತಿ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಶೇ.14 ಮಂದಿ ಮಾತ್ರ ಲಾಡೆನ್ ಹತ್ಯೆಯ ನಂತರ ಭಯೋತ್ಪಾದನಾ ಚಟುವಟಿಕೆಗಳು ಕಡಿಮೆಯಾಗಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದೇಶದ ಸೌರ್ವಭೌಮತ್ವಕ್ಕೆ ಧಕ್ಕೆಯಾಗಿದೆ ಎಂದು ಮೂರನೇ ಎರಡು ಭಾಗಕ್ಕಿಂತ ಹೆಚ್ಚು ಅಂದರೆ ಶೇ.68 ಜನರು ಅಭಿಪ್ರಾಯಪಟ್ಟಿದ್ದಾರೆ. ಈ ವಾದವನ್ನು ಶೇ. 28 ಜನರು ನಿರಾಕರಿಸಿದ್ದಾರೆ.
ಗ್ಯಾಲ್‌ಅಪ್ ಇಂಟರ್ ನ್ಯಾಷನಲ್ ಸಂಸ್ಥೆಯ ಪಾಕಿಸ್ತಾನಿ ಘಟಕ ನಡೆಸಿದ ಸಮೀಕ್ಷಾ ವರದಿಯನ್ನು ಗಿಲಾನಿ ಫೌಂಡೇಷನ್ ಬಿಡುಗಡೆ ಮಾಡಿದೆ.