ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಅಲ್ ಖಾಯಿದಾ ವರಿಷ್ಠ ಲಾಡೆನ್ ಹತ್ಯೆ ನಂತರ ಇದೀಗ ಅಫ್ಘಾನಿಸ್ತಾನ್ ಶಾಂತಿ ಮಾತುಕತೆಯಲ್ಲಿ ಕೈಜೋಡಿಸುವಂತೆ ಉಗ್ರಗಾಮಿ ಹಕ್ಕಾನಿ ಸಂಘಟನೆಗೆ ಮನವರಿಕೆ ಮಾಡಿಕೊಡುವಲ್ಲಿ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐ ಮುಂದಾಗಿರುವುದಾಗಿ ವರದಿಯೊಂದು ತಿಳಿಸಿದೆ.
ಹಕ್ಕಾನಿ ಸಂಘಟನೆ ಅಫ್ಘಾನಿಸ್ತಾನದ ಶಾಂತಿ ಮಾತುಕತೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಬಯಕೆ ಐಎಸ್ಐನದ್ದು ಎಂದು ವರದಿ ಹೇಳಿದೆ. ಅಲ್ಲದೇ ಉಗ್ರಗಾಮಿ ಸಂಘಟನೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಅಮೆರಿಕ ಎಚ್ಚರಿಕೆ ನೀಡಿದೆ. ಹಾಗಾಗಿ ಕಾರ್ಯಾಚರಣೆ ಪಾಕಿಸ್ತಾನಕ್ಕೂ ಅನಿವಾರ್ಯವಾಗಲಿದೆ ಎಂದು ತಿಳಿಸಿರುವುದಾಗಿ ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ವಿವರಿಸಿದೆ.
ಉಗ್ರಗಾಮಿ ಸಂಘಟನೆಗಳನ್ನು ಬುಡಸಮೇತ ಕಿತ್ತುಹಾಕಬೇಕೆಂಬುದು ಅಮೆರಿಕದ ಇಚ್ಛೆಯಾಗಿದೆ. ಹಾಗಾಗಿ ಈಗಾಗಲೇ ಅಫ್ಘಾನಿಸ್ತಾನದಲ್ಲಿ ಹಲವಾರು ದಾಳಿಗಳನ್ನು ನಡೆಸಿದೆ.
ಇದೀಗ ಐಎಸ್ಐ ನಿರ್ದೇಶನದ ಮೇರೆಗೆ ಬುಡಕಟ್ಟು ಹಿರಿಯರು ಹಕ್ಕಾನಿ ಸಂಘಟನೆಯ ಆಪ್ತರನ್ನು ಸಂಪರ್ಕಿಸಿ, ಅಮೆರಿಕದ ಸಿಐಎ ಡ್ರೋನ್ ದಾಳಿ ಮತ್ತು ಒಸಾಮಾ ಬಿನ್ ಲಾಡೆನ್ ಹತ್ಯೆ ಘಟನೆಯನ್ನು ವಿವರಿಸಿ ಎಚ್ಚರಿಕೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.