ಪಾಕಿಸ್ತಾನದಲ್ಲಿ ಎರಡು ನೂತನ ಅಣು ರಿಯಾಕ್ಟರ್ ನಿರ್ಮಾಣಕ್ಕೆ ನೆರವು ನೀಡುತ್ತಿರುವ ಬೆನ್ನಲ್ಲೇ ಚೀನಾ ಇದೀಗ ಪಾಕ್‌ಗೆ ಬಹುಪಯೋಗಿ 50 ಯುದ್ಧ ವಿಮಾನಗಳನ್ನು ನೀಡಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಪ್ರಸಕ್ತ ವಾರದಲ್ಲಿ ಚೀನಾ ಪಾಕಿಸ್ತಾನಕ್ಕೆ 50 ಜೆಎಫ್-17 ಯುದ್ಧ ವಿಮಾನವನ್ನು ಹಸ್ತಾಂತರಿಸಿರುವುದಾಗಿ ಡಾನ್ ಪತ್ರಿಕೆ ವಿವರಿಸಿದೆ. ಮೇ 2ರಂದು ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಅಲ್ ಖಾಯಿದಾ ವರಿಷ್ಠ ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕ ವಿಶೇಷ ಸೇನಾ ಪಡೆ ಹತ್ಯೆಗೈದ ನಂತರ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅವರು ಚೀನಾಕ್ಕೆ ಮಂಗಳವಾರದಿಂದ ಕೈಗೊಂಡ ನಾಲ್ಕು ದಿನಗಳ ಪ್ರವಾಸದ ಸಂದರ್ಭದಲ್ಲಿ ಈ ಮಾತುಕತೆ ನಡೆದಿದೆ ಎಂದು ವರದಿ ತಿಳಿಸಿದೆ.
ಪಾಕಿಸ್ತಾನ ಮತ್ತು ಚೀನಾ ಜಂಟಿಯಾಗಿ ಜೆಎಫ್-17 ಯುದ್ಧ ವಿಮಾನವನ್ನು ತಯಾರಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ 50 ಯುದ್ಧ ವಿಮಾನಗಳು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವುದಾಗಿ ಹೇಳಿದೆ.
ಪಾಕಿಸ್ತಾನದ ವಾಯುಸೇನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಚೀನಾ 50 ಯುದ್ಧ ವಿಮಾನ ನೀಡಿದೆ. ಅಲ್ಲದೇ ಯುದ್ಧ ವಿಮಾನದ ಸಂಪೂರ್ಣ ವೆಚ್ಚವನ್ನು ಚೀನಾವೇ ಭರಿಸಿರುವುದಾಗಿ ವರದಿ ತಿಳಿಸಿದೆ.