ಪಾಕಿಸ್ತಾನ ವಶದಲ್ಲಿರುವ ಒಸಾಮಾ ಬಿನ್ ಲಾಡೆನ್‌ನ ಮೂವರು ಪತ್ನಿಯರು ಹಾಗೂ ಒಂಬತ್ತು ಮಕ್ಕಳನ್ನು ದೇಶದಲ್ಲಿ ವಾಸಿಸಲು ಅವಕಾಶ ನೀಡಿ ಎಂಬ ಪಾಕಿಸ್ತಾನದ ಮನವಿಯನ್ನು ಸೌದಿ ಅರೇಬಿಯಾ ಸಾರಸಗಟಾಗಿ ತಳ್ಳಿಹಾಕಿದೆ.
ಮೇ 2ರಂದು ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಅಮೆರಿಕದ ವಿಶೇಷ ಸೇನಾಪಡೆ ಕಾರ್ಯಾಚರಣೆ ನಡೆಸುವ ಮೂಲಕ ಅಲ್ ಖಾಯಿದಾ ವರಿಷ್ಠ ಒಸಾಮಾ ಬಿನ್ ಲಾಡೆನ್‌ನನ್ನು ಹತ್ಯೆಗೈದಿತ್ತು.
ಲಾಡೆನ್ ಮೂವರು ಹೆಂಡತಿಯರು ಮತ್ತು ಮಕ್ಕಳು ಪಾಕಿಸ್ತಾನ ಅಧಿಕಾರಿಗಳ ವಶದಲ್ಲಿದ್ದಾರೆ. ಅವರನ್ನು ಕಳೆದ ವಾರ ಅಮೆರಿಕದ ಗುಪ್ತಚರ ಇಲಾಖೆ ಅಧಿಕಾರಿಗಳು ಕೂಡ ಮೂವರು ಪತ್ನಿಯರನ್ನು ತೀವ್ರ ವಿಚಾರಣೆಗೊಳಪಡಿಸಿದ್ದರು.
ಏತನ್ಮಧ್ಯೆ ಇತ್ತೀಚೆಗಷ್ಟೇ ರಿಯಾದ್‌ಗೆ ಭೇಟಿ ನೀಡಿದ್ದ ಪಾಕಿಸ್ತಾನದ ಆಂತರಿಕ ಸಚಿವ ರೆಹಮಾನ್ ಮಲಿಕ್ ಅವರು, ಲಾಡೆನ್ ಕುಟುಂಬ ವರ್ಗದವರಿಗೆ ವಾಸಿಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿರುವುದಾಗಿ ದಿ ಎಕ್ಸ್‌ಪ್ರೆಸ್ ಟ್ರೈಬ್ಯೂನ್ ವರದಿ ಮಾಡಿದೆ.
ಮಲಿಕ್ ಮನವಿಯ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸೌದಿ ಅರೇಬಿಯಾ, ಒಸಾಮಾ ಬಿನ್ ಲಾಡೆನ್‌ನ ಸೌದಿ ಅರೇಬಿಯಾದ ನಾಗರಿಕತ್ವವನ್ನು ರದ್ದುಗೊಳಿಸಿ ಸುಮಾರು 15 ವರ್ಷವೇ ಕಳೆದಿದೆ. ಹಾಗಾಗಿ ತಾನು ಆ ಕುಟುಂಬಕ್ಕೆ ಆಶ್ರಯ ನೀಡುವ ಪ್ರಶ್ನೆಯೇ ಇಲ್ಲ ಎಂದು ಸೌದಿ ಅರೇಬಿಯಾ ಸ್ಪಷ್ಟಪಡಿಸಿದೆ.