ಈಗ 87 ಅಷ್ಟೇ,100 ವರ್ಷ ಬದುಕ್ತೇನೆ: ಜಿಂಬಾಬ್ವೆ ಅಧ್ಯಕ್ಷ!
ಹರಾರೆ, ಶನಿವಾರ, 21 ಮೇ 2011( 09:36 IST )
'ನನಗೇನೂ ಆಗಿಲ್ಲ, ನಾನು ನೂರು ವರ್ಷಗಳ ತನಕ ಕಲ್ಲುಬಂಡೆಯಂತೆ ಬದುಕುತ್ತೇನೆ'...ಇದು ಜಿಂಬಾಬ್ವೆಯ ವಯೋವೃದ್ಧ ಅಧ್ಯಕ್ಷ ರೋಬರ್ಟ್ ಮುಗಾಬೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆಂಬ ಊಹಾಪೋಹದ ಸುದ್ದಿಗೆ ನೀಡಿರುವ ಪ್ರತಿಕ್ರಿಯೆ.
ಇತ್ತೀಚೆಗೆ 87ರ ಹರೆಯದ ಮುಗಾಬೆ ಹರಾರೆಯಲ್ಲಿರುವ ತಮ್ಮ ನಿವಾಸದಲ್ಲಿ ಕುಸಿದುಬಿದ್ದಿದ್ದರು. ಈ ಬಗ್ಗೆ ಹಬ್ಬಿರುವ ಸುದ್ದಿಗೆ ಉಡಾಫೆ ಉತ್ತರ ನೀಡಿದ ಅವರು, ನಾನು ಆರೋಗ್ಯವಂತನಾಗಿದ್ದೇನೆ ಅಷ್ಟೇ ಅಲ್ಲ ಪ್ರತಿದಿನ ವ್ಯಾಯಾಮ ಮಾಡುತ್ತಿರುವುದಾಗಿ ಹೇಳಿದ್ದರು.
ನಾನು ವ್ಯಾಯಾಮ ಮಾಡದೆ ಇದ್ದ ಕಾರಣ ಸ್ವಲ್ಪ ಪ್ರಮಾಣದಲ್ಲಿ ಅಸ್ವಸ್ಥಗೊಂಡಿರುವುದಾಗಿ ಮುಗಾಬೆ ಸಮಜಾಯಿಷಿ ನೀಡಿದ್ದಾರೆ. ತಾನೀಗ ಕ್ಯಾಲ್ಸಿಯಂಯುಕ್ತ ಔಷಧ ಸೇವಿಸುತ್ತಿದ್ದೇನೆ. ಆದರೆ ನಾನೇನು ಅದನ್ನೆಲ್ಲ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲ್ಲ ಎಂದು ತಿಳಿಸಿದ್ದಾರೆ.
ಕಳೆದ 31 ವರ್ಷಗಳಿಂದ ಜಿಂಬಾಬ್ವೆಯನ್ನು ಆಳುತ್ತಿರುವ ಮುಗಾಬೆ ಅನಾರೋಗ್ಯದ ಕಾರಣದಿಂದಲೇ ವೈದ್ಯಕೀಯ ಚಿಕಿತ್ಸೆಗಾಗಿ ಐದು ಬಾರಿ ಸಿಂಗಾಪುರಕ್ಕೆ ತೆರಳಿದ್ದರು. ಪ್ರತಿ ಬಾರಿಯೂ ಭೇಟಿಯ ಖರ್ಚು ಸುಮಾರು 2 ಮಿಲಿಯನ್.
ನಾನೇನು ಮುದುಕನಲ್ಲ, ನನಗೀಗ 87 ವರ್ಷ ಅಷ್ಟೇ!.ಆದರೆ ನನ್ನ ದೇಹಸ್ಥಿತಿಯ ಮಟ್ಟಿಗೆ ನಾನೇನು 87ಕ್ಕೆ ಸಾಯಲ್ಲ. ಸುಮಾರು 100 ವರ್ಷ ಬದುಕುತ್ತೇನೆ ಎಂದು ಅಜ್ಜ ವಿಶ್ವಾಸವ್ಯಕ್ತಪಡಿಸಿದ್ದಾರೆ.