ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಅಮೆರಿಕ ವಿಶೇಷ ಸೇನಾಪಡೆಯಿಂದ ಹತ್ಯೆಗೀಡಾದ ಅಲ್ ಖಾಯಿದಾ ವರಿಷ್ಠ ಒಸಾಮಾ ಬಿನ್ ಲಾಡೆನ್ ಪಾತಕಿ ಹೊರತು, ಹುತಾತ್ಮನಲ್ಲ. ಆತ ಸಾಮೂಹಿಕವಾಗಿ ನರಮೇಧ ನಡೆಸಿದ ರಕ್ತಪಿಪಾಸು ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಲಾಡೆನ್ ಬೇಟೆಯಲ್ಲಿ ತೊಡಗಿದ್ದ ಅಮೆರಿಕ ಪಡೆಗೆ ಕೊನೆಗೂ ಆತನ ಜಾಡು ಪತ್ತೆಯಾಗಿತ್ತು. ಆ ಹಿನ್ನೆಲೆಯಲ್ಲಿ ಮೇ 2ರಂದು ದಿಢೀರ್ ಕಾರ್ಯಾಚರಣೆ ನಡೆಸುವ ಮೂಲಕ ಲಾಡೆನ್‌ನನ್ನು ಹತ್ಯೆಗೈದಿತ್ತು.
ಜನರಲ್ಲಿ ಕೇವಲ ದ್ವೇಷ ಭಾವನೆಯನ್ನು ಬಿತ್ತಿ ಪಾಶ್ಚಾತ್ಯರ ವಿರುದ್ಧ ಶಸ್ತ್ರಾಸ್ತ್ರ ಹಿಡಿಯುವಂತೆ ಮುಸ್ಲಿಮರನ್ನು ಪ್ರಚೋದಿಸಿದ ಲಾಡೆನ್ ಎಂದಿಗೂ ಹುತಾತ್ಮನಾಗಲು ಸಾಧ್ಯವಿಲ್ಲ. ಮಾನವೀಯತೆ ವಿರೋಧಿಯಾಗಿರುವ ಆತ ರಕ್ತಪಿಪಾಸು ಎಂದು ಆಕ್ರೋಶವ್ಯಕ್ತಪಡಿಸಿದರು.
ಅಲ್ಲದೇ ಇರಾಕ್‌ನಲ್ಲಿದ್ದ ಒಂದು ಲಕ್ಷ ಸೈನಿಕರನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ಅಫ್ಘಾನಿಸ್ತಾನದಿಂದ ಜುಲೈನಲ್ಲಿ ಸೇನೆಯನ್ನು ವಾಪಸ್ ಕರೆಸಿಕೊಳ್ಳಲಾಗುವುದು ಎಂದು ಒಬಾಮಾ ಈ ಸಂದರ್ಭದಲ್ಲಿ ತಿಳಿಸಿದರು. ಆದರೆ ಭಯೋತ್ಪಾದನೆ ವಿರುದ್ಧದ ಅಮೆರಿಕ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.