ಪಾಕ್‌ನಲ್ಲಿ ಪ್ರಮುಖ ಉಗ್ರ ಪತ್ತೆಯಾದ್ರೆ ಮತ್ತೆ ದಾಳಿ: ಒಬಾಮಾ
ಲಂಡನ್, ಸೋಮವಾರ, 23 ಮೇ 2011( 16:24 IST )
ಪಾಕಿಸ್ತಾನದ ನೆಲದಲ್ಲಿ ಮತ್ತೊಬ್ಬ ಪ್ರಮುಖ ಉಗ್ರನ ಪತ್ತೆಯಾದಲ್ಲಿ ದಾಳಿ ಅಮೆರಿಕ ಮತ್ತೊಂದು ದಿಢೀರ್ ದಾಳಿ ನಡೆಸಲು ಸಿದ್ದ ಎಂದು ಅಧ್ಯಕ್ಷ ಬರಾಕ್ ಒಬಾಮಾ ಬಿಬಿಸಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡುತ್ತ ತಿಳಿಸಿದ್ದಾರೆ.
2001ರ ಸೆಪ್ಟೆಂಬರ್ 11ರಂದು ಅಮೆರಿಕದ ವರ್ಲ್ಡ್ ಟ್ರೇಟ್ ಸೆಂಟರ್ ಮೇಲೆ ದಾಳಿ ನಡೆಸಿದ ಮಾಸ್ಟರ್ ಮೈಂಡ್, ಜಾಗತಿಕ ಭಯೋತ್ಪಾದಕ ಅಲ್ ಖಾಯಿದಾ ವರಿಷ್ಠ ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕದ ವಿಶೇಷ ಸೇನಾಪಡೆ ಮೇ 2ರಂದು ಪಾಕಿಸ್ತಾನದ ಅಬೋಟಾಬಾದ್‌ನ ಐಶಾರಾಮಿ ನಿವಾಸದ ಮೇಲೆ ದಿಢೀರ್ ದಾಳಿ ನಡೆಸಿ ಹತ್ಯೆಗೈದಿತ್ತು.
ಲಾಡೆನ್ ಹತ್ಯೆಯ ನಂತರ ಪಾಕಿಸ್ತಾನ ಅಥವಾ ಬೇರಾವ ದೇಶದಲ್ಲಿ ಅಂತದ್ದೇ ಉಗ್ರನ ಪತ್ತೆಯಾದಲ್ಲಿ ಅಮೆರಿಕ ಇದೇ ರೀತಿಯ ದಿಢೀರ್ ದಾಳಿ ನಡೆಸುತ್ತದೆಯೇ ಎಂದು ಬರಾಕ್ ಅವರನ್ನು ಪ್ರಶ್ನಿಸಿದಾಗ, ಒಂದು ವೇಳೆ ಅಲ್ ಖಾಯಿದಾದ ಹಿರಿಯ ಸದಸ್ಯ ಅಥವಾ ಅಫ್ಘಾನ್ ತಾಲಿಬಾನ್ ಮುಖಂಡ ಮುಲ್ಲಾ ಓಮರ್ (ಮುಲ್ಲಾನನ್ನು ಐಎಸ್ಐ ಭಾನುವಾರವೇ ಗುಂಡಿಟ್ಟು ಹತ್ಯೆಗೈದಿದೆ) ಪತ್ತೆಯಾದಲ್ಲಿ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದರು.
ನಾವು ಪಾಕಿಸ್ತಾನದ ಸಾರ್ವಭೌಮತ್ವವನ್ನು ತುಂಬಾ ಗೌರವಿಸುತ್ತೇವೆ. ಆದರೆ ನಮ್ಮ ಜನ ಅಥವಾ ನಮ್ಮ ಮೈತ್ರಿಕೂಟದ ಜನರನ್ನು ಹತ್ಯೆಗೈಯುವ ಸಂಚಿಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡಲಾರೆವು. ಆ ನಿಟ್ಟಿನಲ್ಲಿ ನಾವು ಯಾವ ಹಿಂಜರಿಕೆ ಇಲ್ಲದೆ ಕೆಲವು ಕ್ರಮ ಕೈಗೊಳ್ಳುವುದು ಖಚಿತ ಎಂದು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.
ನನ್ನಲ್ಲಿ ಯಾವುದೇ ರಹಸ್ಯ ಇಲ್ಲ. ನಾನು ಅಧ್ಯಕ್ಷಗಾದಿಯಲ್ಲಿ ಮುಂದುವರಿಯುತ್ತಿರುವ ಸಂದರ್ಭದಲ್ಲಿಯೇ ಒಸಾಮಾ ಬಿನ್ ಲಾಡೆನ್ ಬೇಟೆಯಾಡುವುದು ಖಚಿತ ಎಂದು ಹೇಳಿದ್ದೆ. ಅದೇ ರೀತಿ ನಡೆದುಕೊಂಡಿರುವುದಾಗಿ ತಿಳಿಸಿದರು.
ಏಕಪಕ್ಷೀಯ ದಾಳಿ ಕುರಿತಂತೆ ನಾವು ಚರ್ಚೆ ನಡೆಸಬೇಕಾದ ಅಗತ್ಯವಿದೆ ಮತ್ತು ಭಯೋತ್ಪಾನೆ ನಿಗ್ರಹಕ್ಕೆ ಸಂಬಂಧಿಸಿದಂತೆ ನಮ್ಮ ಸಹಕಾರವನ್ನು ಹೆಚ್ಚು ಬಿಂಬಿಸಬೇಕಾಗಿದೆ ಎಂದು ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ವಕ್ತಾರ ಫಾರಾತುಲ್ಲಾ ಬಾಬಾರ್ ತಿಳಿಸಿದ್ದು, ಈ ಬಗ್ಗೆ ಹೆಚ್ಚಿನ ವಿವರಣೆ ನೀಡಲು ನಿರಾಕರಿಸಿದರು.