ಅಲ್ ಖಾಯಿದಾ ವರಿಷ್ಠ ಒಸಾಮಾ ಬಿನ್ ಲಾಡೆನ್ ಅಬೋಟಾಬಾದ್‌ನ ಮನೆಯಲ್ಲೇ ವಾಸವಾಗಿರುವ ಬಗ್ಗೆ ಯಾರೋ ಖಚಿತ ಸುಳಿವು ನೀಡಿದ್ದಾರೆ. ಹಾಗಾಗಿಯೇ ಒಸಾಮಾ ಇದ್ದ ಮನೆ ಮೇಲೆ ಅಮೆರಿಕ ದಾಳಿ ನಡೆಸಲು ಸಾಧ್ಯವಾಯಿತು ಎಂದು ಪಾಕಿಸ್ತಾನ ಆಂತರಿಕ ವ್ಯವಹಾರಗಳ ಸಚಿವ ರೆಹಮಾನ್ ಮಲಿಕ್ ಹೇಳಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ದಾಳಿ ನಡೆದ ನಂತರ ನಮಗೆ ಆ ಮನೆಯಲ್ಲಿ ಲಾಡೆನ್ ಇರಬಹುದು ಎಂಬ ಶಂಕೆ ಬಲವಾಗಿತ್ತಷ್ಟೇ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಆದರೆ ನಿಖರ ಮಾಹಿತಿ ಇದ್ದರೆ ಮಾತ್ರವೇ ಅವನಿದ್ದ ಕೊಠಡಿಗೆ ನುಗ್ಗಲು ಸಾಧ್ಯವಿತ್ತು ಎಂದು ಸಂಡೆ ಟೈಮ್ಸ್ ವರದಿ ಮಾಡಿದೆ.
ಒಸಾಮಾ ಬಿನ್ ಲಾಡೆನ್‌ನ ಯೆಮೆನ್ ಮೂಲದ ಕಿರಿಯ ಪತ್ನಿ ಆತನಿಗೆ ವಿಶ್ವಾಸದ್ರೋಹ ಎಸಗಿದ್ದಾರೆಂದು ಸೌದಿಯ ಪತ್ನಿಯರು ಬಲವಾಗಿ ಶಂಕಿಸಿದ್ದಾರೆ ಎಂದು ವರದಿ ಹೇಳಿದೆ. ಅಲ್ಲದೇ ಒಬ್ಬ ಜಾಗೃತದಳದ ಅಧಿಕಾರಿಯಾಗಿ ಹಲವಾರು ವರ್ಷಗಳ ಅನುಭವವಿರುವ ನನಗೆ, ಯಾರೋ ಒಳಗಿನವರೇ ಮಾಹಿತಿ ನೀಡಿದ್ದಾರೆಂಬ ಬಲವಾದ ಅನುಮಾನವಿದೆ ಎಂದರು.
ಅಮೆರಿಕದ ಪಡೆಗಳಿಗೆ ನಿಖರ ಮಾಹಿತಿ ಇರದಿದ್ದರೆ ಅವರು ನೇರವಾಗಿ ಲಾಡೆನ್ ಇದ್ದ ಕೊಠಡಿಗೆ ನುಗ್ಗಲು ಸಾಧ್ಯವಿರಲಿಲ್ಲ ಎಂದು ಮಲಿಕ್ ತಿಳಿಸಿದ್ದಾರೆ.