'ಸಿರಿಯಾ, ಇರಾಕ್, ಇರಾನ್, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ಪ್ರಜೆಗಳು ದೇಶದೊಳಕ್ಕೆ ಬರಲು ಕುವೈಟ್ ನಿಷೇಧ ಹೇರಿರುವುದಾಗಿ' ಸ್ಥಳೀಯ ಮಾಧ್ಯಮದ ವರದಿಯೊಂದು ತಿಳಿಸಿದೆ.
ವಿಸಿಟ್ ಮತ್ತು ವಾಣಿಜ್ಯ ವೀಸಾ ಸೇರಿದಂತೆ ಎಲ್ಲಾ ರೀತಿಯ ಪ್ರವಾಸೋದ್ಯಮ ವೀಸಾಗಳಿಗೂ ಕುವೈಟ್ ನಿಷೇಧ ಹೇರಿದೆ. ಅದೇ ರೀತಿ ಪತಿ ಅಥವಾ ಪತ್ನಿಯರಿಗೆ ನೀಡುವ ಸ್ಫಾನ್ಸರ್ ವೀಸಾಕ್ಕೂ ನಿರ್ಬಂಧ ಹೇರಿರುವುದಾಗಿ ಇಮಿಗ್ರೇಶನ್ ಅಧಿಕಾರಿಗಳು ತಿಳಿಸಿರುವುದಾಗಿ ಕುವೈಟ್ ಮಾಧ್ಯಮದ ವರದಿ ವಿವರಿಸಿದೆ.
ಕಠಿಣ ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಐದು ದೇಶಗಳ ಪ್ರಜೆಗಳ ಭೇಟಿಗೆ ನಿಷೇಧ ಹೇರಲಾಗಿದೆ. ಅಲ್ಲದೇ ಕುವೈಟ್‌ನ ಸ್ಥಳೀಯ ಅಧಿಕಾರಿಗಳಿಂದ ಬಂಧನದ ಅಥವಾ ಬಂಧಿಸಲ್ಪಡುವ ಭಯ ಎದುರಿಸುತ್ತಿರುವ ಸಂಬಂಧಿಗಳನ್ನು ಕರೆದೊಯ್ಯಲು ಈ ಐದು ದೇಶಗಳಿಂದ ವೀಸಾ ಬೇಡಿಕೆ ಹೆಚ್ಚುತ್ತಿರುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ವೀಸಾಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ಬಗ್ಗೆ ಯಾವುದೇ ವಿನಾಯಿತಿ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ ಈ ನಿಷೇಧ ತಾತ್ಕಾಲಿಕವಾಗಿದ್ದು, ಭದ್ರತಾ ಪರಿಸ್ಥಿತಿ ಸ್ಥಿರವಾದ ನಂತರ ನಿಷೇಧವನ್ನು ವಾಪಸ್ ಪಡೆಯಲಾಗುವುದು ಎಂದು ಸಂದರ್ಭದಲ್ಲಿ ಹೇಳಿದ್ದಾರೆ.