ಮುಂಬೈ ಮೇಲೆ 26/11ರಂದು ದಾಳಿ ನಡೆಸಿದ ಲಷ್ಕರ್ ಎ ತೋಯ್ಬಾ ಉಗ್ರಗಾಮಿ ಸಂಘಟನೆಗೆ ಪಾಕ್ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಸಂಪೂರ್ಣ ಸಹಕಾರ ನೀಡಿತ್ತು ಎಂದು ಪಾಕ್ ಸಂಜಾತ ಉಗ್ರಗಾಮಿ ಡೇವಿಡ್ ಕೋಲ್ಮನ್ ಹೆಡ್ಲಿ ಪುನರುಚ್ಚರಿಸಿದ್ದಾನೆ. ದಾಳಿಯ ಆಪಾದನೆಯ ಮೇರೆಗೆ ಅಮೆರಿಕದಲ್ಲಿ ಬಂಧಿತನಾಗಿರುವ ಆತ ಈ ವಿಷಯವನ್ನು ಚಿಕಾಗೋ ಕೋರ್ಟ್‌ನಲ್ಲಿ ವಿಚಾರಣೆ ವೇಳೆ ಸೋಮವಾರ ಬಹಿರಂಗ ಪಡಿಸಿದ್ದಾನೆ.
'ಲಷ್ಕರ್ ಮತ್ತು ಐಎಸ್ಐ ಪರಸ್ಪರ ಸಮನ್ವಯ ಹೊಂದಿದ್ದವು' ಎಂದು ಹೆಡ್ಲಿ ಮರಣದಂಡನೆ ಶಿಕ್ಷೆಯಿಂದ ಪಾರಾಗುವ ನಿಟ್ಟಿನಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ತನ್ನ ಒಂದು ಕಾಲದ ಸ್ನೇಹಿತ, ಪಾಕ್ ಸಂಜಾತ ಕೆನಡಿಯನ್ ಉಗ್ರಗಾಮಿ ತಹಾವುರ್ ರಾಣಾನ ವಿಚಾರಣೆಯಲ್ಲಿ ಪ್ರಧಾನ ಸಾಕ್ಷಿದಾರನಾಗಿ ಹೆಡ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ.
ಲಷ್ಕರ್ ಉಗ್ರರಿಗೆ ಐಎಸ್‌ಐ ಶಸ್ತ್ರಾಸ್ತ್ರ, ಹಣಕಾಸಿನ ನೆರವು ಹಾಗೂ ನೈತಿಕ ಬೆಂಬಲ ನೀಡಿತ್ತು ಎಂದು ರಾಣಾ ತಿಳಿಸಿದ್ದಾನೆ.
ಮೇ 2ರಂದು ಅಮೆರಿಕ ಕಮಾಂಡೋ ಪಡೆಗಳಿಂದ ಹತ್ಯೆಗೀಡಾದ ಅಲ್ ಖೈದಾ ಉಗ್ರಗಾಮಿ ಒಸಾಮಾ ಬಿನ್ ಲಾಡೆನ್‌ನನ್ನು ರಕ್ಷಿಸುವಲ್ಲಿ ಐಎಸ್ಐ ಪ್ರಯತ್ನಿಸುತ್ತಿತ್ತು ಎಂಬ ವರದಿಗಳ ಹಿನ್ನೆಲೆಯಲ್ಲಿ ಹೆಡ್ಲಿಯ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಹೆಡ್ಲಿಯ ತಂದೆ ಪಾಕಿಸ್ತಾನೀಯನಾಗಿದ್ದು, ತಾಯಿ ಅಮೆರಿಕನ್ ಮಹಿಳೆ. ಈತ ದಾಳಿಗಳಲ್ಲಿ ತನ್ನ ಗುರುತು ಸಿಗಬಾರದು ಎಂಬ ಕಾರಣಕ್ಕೆ 2006ರಲ್ಲಿ ದಾವೂದ್ ಗೀಲಾನಿ ಎಂದಿದ್ದ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದ.
ತಾನು ಮೊದಲು ಪಾಕಿಸ್ತಾನದಲ್ಲಿ ಉಗ್ರಗಾಮಿ ತರಬೇತಿ ಪಡೆದಿದ್ದು, ಲಷ್ಕರ್ ಇ ತೊಯ್ಬಾ ಸಂಘಟನೆಯ ಜತೆ ದಶಕದಿಂದಲೂ ಸಂಪರ್ಕ ಹೊಂದಿರುವುದಾಗಿ ಆತ ತಿಳಿಸಿದ್ದಾನೆ.
ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ 166 ಜನರ ಸಾವಿಗೆ ಕಾರಣವಾಗಿದ್ದ ಮುಂಬೈ ದಾಳಿಯ ಪ್ರಧಾನ ಸಂಚುಕೋರನಾಗಿದ್ದಾನೆ ಎಂದು ಹೇಳಿರುವ ಹೆಡ್ಲಿ, ಜಿಹಾದ್‌ನಲ್ಲಿ ಪಾಲ್ಗೊಳ್ಳುವಂತೆ ಆತ ತನಗೆ ಮನವೊಲಿಸಿದ್ದ ಹಾಗೂ ಒಂದು ಸೆಕೆಂಡು ಜಿಹಾದ್‌ನಲ್ಲಿ ಪಾಲ್ಗೊಳ್ಳುವುದು '100 ವರ್ಷಗಳ ಪೂಜೆಗೆ ಸಮ' ಎಂದು ಹೇಳಿದ್ದಾಗಿ ಹೆಡ್ಲಿ ತಿಳಿಸಿದ್ದಾನೆ. ಐಎಸ್‌ಐನ 'ಮೇಜರ್' ಇಕ್ಬಾಲ್ ಜೊತೆಗೂ ತಾನು ಸಂಪರ್ಕದಲ್ಲಿದ್ದುದಾಗಿ ಆತ ಹೇಳಿದ್ದಾನೆ.
ಮುಂಬೈ ದಾಳಿಗೆ ಐಎಸ್ಐ ಲಿಂಕ್ ಪಾಕಿಸ್ತಾನದ ಸೇನಾ ತರಬೇತಿ ಶಾಲೆಯಲ್ಲಿ ರಾಣಾನೊಂದಿಗೆ ಸ್ನೇಹಿತನಾಗಿದ್ದ ಹೆಡ್ಲಿ, ಮುಂಬೈ ದಾಳಿ ನಡೆಸುವ ಎರಡು ವರ್ಷ ಮೊದಲೇ ಸಂಚು ರೂಪಿಸಲಾಗಿತ್ತು. ಇದಕ್ಕೆ ಐಎಸ್‌ಐ ಅಧಿಕಾರಿ ಮೇಜರ್ ಇಕ್ಬಾಲ್ 25 ಸಾವಿರ ಡಾಲರ್ ನೀಡಿದ್ದ ಎಂದು ಬಯಲುಗೊಳಿಸಿದ್ದಾನೆ.
ಮುಂಬೈ ದಾಳಿಯ ಸಂಚು ರೂಪಿಸುವಲ್ಲಿ ಪಾತ್ರ ವಹಿಸಿದ ರಾಣಾ, ಆತ ಚಿಕಾಗೋದಲ್ಲಿ ಕುಳಿತೇ ಸಂಚು ರೂಪಿಸಿದ್ದ ಎಂದು ಪ್ರಾಸಿಕ್ಯೂಟರ್‌ಗಲು ವಾದಿಸಿದರು.
ರಾಣಾ-ಹೆಡ್ಲಿ ತಿಕ್ಕಾಟ ಆದರೆ, ತಾನು ತಪ್ಪಿತಸ್ಥನಲ್ಲ ಎಂದು 50ರ ಹರೆಯದ ರಾಣಾ ಹೇಳಿದ್ದಾನೆ. ಹೆಡ್ಲಿ ರಾಣಾನನ್ನು ಮೂರ್ಖನನ್ನಾಗಿಸಿದ್ದಾನೆ ಎಂದು ರಾಣಾ ಪರ ವಕೀಲ ಚಾರ್ಲ್ಸ್ ಸ್ವಿಫ್ಟ್ ನ್ಯಾಯಾಲಯಕ್ಕೆ ಹೇಳಿದ್ದಾರೆ. ಹೆಡ್ಲಿ ಹಲವಾರು ವರ್ಷಗಳಿಂದ ಜನರನ್ನು ದಾರಿತಪ್ಪಿಸುತ್ತಿದ್ದಾನೆ ಎಂದು ಆಪಾದಿಸಿದ್ದಾರೆ.
ಹೆಡ್ಲಿ ತಾನು ಲಷ್ಕರ್‌ನೊಂದಿಗೆ ಹಲವಾರು ವರ್ಷಗಳಿಂದ ಸಂಬಂಧ ಹೊಂದಿದ್ದೇನೆ ಎಂದು ಹೇಳುತ್ತಿದ್ದರೂ ಅಧಿಕಾರಿಗಳು ಸೇರಿದಂತೆ ಯಾರೊಬ್ಬರೂ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸ್ವಿಫ್ಟ್ ಹೇಳಿದ್ದಾರೆ.
2009ರಲ್ಲಿ ಬಂಧನಕ್ಕೊಳಗಾದ ಹೆಡ್ಲಿ ತಾನು ಪಾರಾಗಲು ರಾಣಾನನ್ನು ಸಂಚಿನಲ್ಲಿ ಸಿಲುಕಿಸಲು ಸುಳ್ಳು ಆರೋಪ ಮಾಡಿದ್ದಾನೆ ಎಂದು ಸ್ವಿಫ್ಟ್ ಹೇಳಿದ್ದಾರೆ.