ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಅಮೆರಿಕ ದಾಳಿ ನಡೆಸಿ ಒಸಾಮಾ ಬಿನ್ ಲಾಡೆನ್ ಅನ್ನು ಹತ್ಯೆಗೈದಿರುವುದು ತಾಂತ್ರಿಕ ಪರಿಣತಿಯ ಸಮರ ಅಷ್ಟೇ ಎಂದಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೆಜ್ ಮುಷರ್ರಫ್, ಒಂದು ವೇಳೆ ಅಗತ್ಯಬಿದ್ದರೆ ಮತ್ತೊಂದು ಅಂತಹದೇ ದಾಳಿ ನಡೆಸಲೂ ಆದೇಶ ನೀಡಲು ಸಿದ್ದ ಎಂಬ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹೇಳಿಕೆ ದುರಹಂಕಾರತನದ್ದು ಎಂದು ಪ್ರತಿಕ್ರಿಯಿಸಿದ್ದಾರೆ.
ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಮೇ 2ರಂದು ಅಮೆರಿಕದ ವಿಶೇಷ ಸೇನಾಪಡೆಗಳು ಅಲ್ ಖಾಯಿದಾ ವರಿಷ್ಠ ಒಸಾಮಾ ಬಿನ್ ಲಾಡೆನ್‌ನನ್ನು ಹತ್ಯೆಗೈದಿದ್ದವು. ಇದು ತಾನು ಕೈಗೊಂಡ ಏಕಪಕ್ಷೀಯ ದಾಳಿ ಎಂಬುದಾಗಿ ಅಮೆರಿಕ ಹೇಳಿಕೊಂಡಿತ್ತು.
ಆದರೆ ಯಾವುದೇ ದೇಶಕ್ಕೂ ಮತ್ತೊಂದು ದೇಶದೊಳಕ್ಕೆ ಹೇಳದೆ, ಕೇಳದೆ ನುಗ್ಗುವ ಅಧಿಕಾರ ಇಲ್ಲ ಎಂದು ಮುಷರ್ರಫ್ ಗುಡುಗಿದ್ದಾರೆ. ನಿಜವಾಗಿಯೂ ತಾಂತ್ರಿಕವಾಗಿ, ಕಾನೂನು ಬದ್ದವಾಗಿ, ಇದನ್ನು ನೋಡಿ....ಇದೊಂದು ಸಮರ. ಹಾಗಾಗಿ ನನ್ನ ಎಣಿಕೆಯ ಪ್ರಕಾರ ಬರಾಕ್ ಅವರದ್ದು ಬೇಜವಾಬ್ದಾರಿತನದ ಹೇಳಿಕೆ. ನಿಮ್ಮ ಇಂತಹ ದುರಹಂಕಾರವನ್ನು ಸಾರ್ವಜನಿಕವಾಗಿ ಜಾಗತಿಕವಾಗಿ ಪ್ರದರ್ಶಿಸಬೇಡಿ ಎಂದು ಮುಷ್ ಸಲಹೆ ನೀಡಿದ್ದಾರೆ.
ತಾಂತ್ರಿಕವಾಗಿಯೂ ಹಾಗೂ ಎಲ್ಲಾ ರೀತಿಯಿಂದಲೂ ವಾಸ್ತವವಾಗಿ ಅಮೆರಿಕದ ಕ್ರಮ ಸಮರವೇ ಆಗಿದೆ ಎಂದು ವಿವರಿಸಿದ ಮುಷರ್ರಫ್, ಹಾಗಂತ ತಾನು ಯುದ್ಧ ನಡೆಯಬೇಕೆಂಬ ಸೂಚನೆ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಒಸಾಮಾ ಬಿನ್ ಲಾಡೆನ್ ತರಹವೇ ಪ್ರಮುಖ ಉಗ್ರಗಾಮಿ ಪಾಕಿಸ್ತಾನದ ನೆಲದಲ್ಲಿ ಪತ್ತೆಯಾದ್ರೆ ಮತ್ತೊಮ್ಮೆ ದಾಳಿ ನಡೆಸಲು ತಾವು ಆದೇಶ ನೀಡುವುದಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಅದಕ್ಕೆ ಪ್ರತಿಯಾಗಿ ಮುಷರ್ರಫ್ ಈ ತಿರುಗೇಟು ನೀಡಿದ್ದಾರೆ.