ಮುಂಬೈ ಮೇಲೆ 26/11ರಂದು ನಡೆಸಿದ ಲಷ್ಕರ್ ಎ ತೋಯ್ಬಾ ಉಗ್ರಗಾಮಿ ಸಂಘಟನೆಗೆ ಪಾಕ್ ಬೇಹುಗಾರಿಕಾ ಸಂಸ್ಥೆ ಐಎಸ್ಐ ಸಂಪೂರ್ಣ ಸಹಕಾರ ನೀಡಿತ್ತು ಎಂದು ಪಾಕ್ ಸಂಜಾತ ಉಗ್ರಗಾಮಿ ಡೇವಿಡ್ ಕೋಲ್ಮನ್ ಹೆಡ್ಲಿ ಅಮೆರಿಕದ ಚಿಕಾಗೋ ನ್ಯಾಯಾಲಯದಲ್ಲಿನ ವಿಚಾರಣೆಯಲ್ಲಿ ಒಂದಾಗಿಯೇ ಸ್ಫೋಟಕ ಮಾಹಿತಿ ಹೊರಹಾಕುತ್ತಿದ್ದರೆ, ಮತ್ತೊಂದೆಡೆ ಪಾಕ್ ಇವೆಲ್ಲಾ ಸುಳ್ಳು ಆರೋಪ ಮುಂಬೈ ದಾಳಿಯಲ್ಲಿ ಐಎಸ್ಐ ಪಾತ್ರವೇ ಇಲ್ಲ ಎಂದು ತಿಪ್ಪರಲಾಗ ಹಾಕತೊಡಗಿದೆ.
ಮುಂಬೈ ದಾಳಿಗೆ ಸಂಬಂಧಿಸಿದಂತೆ ಈ ಮೊದಲು ಕೂಡ ಪಾಕಿಸ್ತಾನ ಇದೇ ರಾಗ ಹಾಡುತ್ತಿದ್ದು, ಇದೀಗ ಅದನ್ನೇ ಮುಂದುವರಿಸಿದೆ. ಆದರೆ ಹೆಡ್ಲಿ ದಾಳಿ ಕುರಿತಂತೆ ಪ್ರತಿಯೊಂದು ಮಾಹಿತಿಯನ್ನು ಹೊರಹಾಕುವ ಮೂಲಕ ಪಾಕ್ ಬಣ್ಣ ಬಯಲು ಮಾಡುತ್ತಿದ್ದಾನೆ. ಅಷ್ಟೇ ಅಲ್ಲ ಹೆಡ್ಲಿಯ ಡೈರಿಯಲ್ಲಿ ಅವನ ಜತೆ ಸಂಪರ್ಕದಲ್ಲಿರುವ ಐಎಸ್ಐ ಅಧಿಕಾರಿಗಳ ಮೊಬೈಲ್ ನಂಬರ್ ಕೂಡ ಸಿಕ್ಕಿದೆ. ಇಷ್ಟಾದರೂ ಪಾಕ್ ತನ್ನ ಪಾತ್ರ ಇಲ್ಲ ಎಂದು ವಾದಿಸುತ್ತಿದೆ.
ಚಿಕಾಗೋ ಕೋರ್ಟ್‌ನಲ್ಲಿ ಡೇವಿಡ್ ಕೋಲ್ಮನ್ ಹೆಡ್ಲಿ ನೀಡಿರುವ ಹೇಳಿಕೆ ಸಂಪೂರ್ಣ ಸತ್ಯಕ್ಕೆ ದೂರವಾದ ಹೇಳಿಕೆ ಎಂದು ವಾಷಿಂಗ್ಟನ್‌ನಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಯ ವಕ್ತಾರ ತಿಳಿಸಿದ್ದಾರೆ.
ಐಎಸ್ಐನಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಹೆಡ್ಲಿಗೆ ಬೆಂಬಲ ನೀಡಿಲ್ಲ. ಅಲ್ಲದೇ ಮುಂಬೈ ದಾಳಿಯ ಹಿಂದೆ ಐಎಸ್ಐ ಕೈವಾಡವೂ ಇಲ್ಲ ಎಂದ ವಕ್ತಾರ, ಡೇವಿಡ್ ಹೆಡ್ಲಿ ಡಬಲ್ ಏಜೆಂಟ್ ಎಂದು ಆರೋಪಿಸಿದ ಅವರು ಆತ ನಂಬಲು ಅರ್ಹನಾದ ಸಾಕ್ಷಿಯಲ್ಲ ಎಂದು ಹೇಳಿದರು.