ತನ್ನ ಸಹೋದರ ಸಂಬಂಧಿಯ ಅಂತ್ಯಸಂಸ್ಕಾರಕ್ಕೆ ತೆರಳುವ ತರಾತುರಿಯಲ್ಲಿ ಕಾರಿನೊಳಗಿದ್ದ ತನ್ನ ಮೂರರ ಹರೆಯದ ಪುಟ್ಟ ಮಗಳನ್ನು ಕರೆದೊಯ್ಯಲು ಮರೆತ ತಂದೆ ಕಾರಿನ ಬೀಗ ಹಾಕಿ ಹೋದ ಪರಿಣಾಮ ಬಾಲಕಿ ಸಾವನ್ನಪ್ಪಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.
ಮಲೇಷ್ಯಾದ ಕಾಂಪಂಗ್ ಮೋರಾಕ್ ಎಂಬಲ್ಲಿ ಭಾನುವಾರ ಈ ಘಟನೆ ನಡೆದಿದೆ. ಇಶಾಕ್ ಸಾಲೆಹ್ ಬಿಸಿಲ ತಾಪದ ನಡುವೆಯೇ ಕಾರನ್ನು ಬದಿಗೆ ನಿಲ್ಲಿಸಿ ಸಂಪೂರ್ಣ ಎಲ್ಲಾ ಗಾಜನ್ನು ಮುಚ್ಚಿ ಹೋಗಿದ್ದರು. ಆದರೆ ಕಾರಿನ ಒಳಗಿದ್ದ ಮಗುವನ್ನೇ ಮರೆತು ಹೋಗಿದ್ದರು. ಸುಮಾರು 45 ನಿಮಿಷಗಳ ಕಾಲ ಮಗು ಕಾರಿನೊಳಗೆ ಕೂಗಾಡಿ, ರಂಪಾಟ ನಡೆಸಿತ್ತು.
ನಂತರ ಇಶಾಕ್ ಗಾಬರಿಗೊಂಡು ವಾಪಸ್ ಬಂದಾಗ ಮಗಳು ನೂರ್ ಇಜ್ಯಾನ್ ನಾಟಾಸ್ಯಾ ಕಾರಿನೊಳಗೆ ಕೂಗಾಡುತ್ತಿದ್ದಳು, ಅಲ್ಲದೇ ಆಕೆ ತುಂಬಾ ಕಷ್ಟದಿಂದ ಉಸಿರಾಡುತ್ತಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಮಗು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು.
ಶವಸಂಸ್ಕಾರಕ್ಕೆ ಹೋಗುವ ಗಡಿಬಿಡಿಯಲ್ಲಿ ನಾನು ಕಾರಿನಿಂದ ಕೆಳಗಿಳಿದಿದ್ದೆ. ನನ್ನ ಮಗಳನ್ನು ತಂಗಿ ಮತ್ತು ಭಾವ ಜೊತೆಗೆ ಕರೆದೊಯ್ದಿದ್ದಾರೆ ಎಂದು ತಿಳಿದುಕೊಂಡಿದ್ದೆ ಇಶಾಕ್ ತಿಳಿಸಿರುವುದಾಗಿ ಮಾಧ್ಯಮದ ವರದಿ ಹೇಳಿದೆ. ಸಂಬಂಧಿಗಳು ಬಂದು ನನ್ನಲ್ಲಿ ಕಾರಿನ ಕೀ ಕೇಳಿದಾಗಲೇ ಮಗಳು ಕಾರಿನೊಳಗೆ ಇರುವ ವಿಷಯ ಗಮನಕ್ಕೆ ಬಂದಿತ್ತು. ಆಗ ಕಾರಿನ ಬಳಿ ಹೋಗಿ ನೋಡಿದರೆ, ಮಗು ತೀವ್ರ ಅಸ್ವಸ್ಥಗೊಂಡಿತ್ತು. ಆಸ್ಪತ್ರೆಗೆ ತೆಗೆದುಕೊಂಡು ಹೋಗುವಷ್ಟರಲ್ಲಿಯೇ ವಿಧಿವಶವಾಗಿತ್ತು ಎಂದು ತಮ್ಮ ದುಃಖವನ್ನು ತೋಡಿಕೊಂಡಿರುವುದಾಗಿ ನ್ಯೂ ಸ್ಟ್ರೈಟ್ಸ್ ಟೈಮ್ಸ್ ವರದಿ ಮಾಡಿದೆ.
ಆಕೆಯ ಸಾವಿನಿಂದ ನನಗೆ ಆಘಾತವಾಗಿದೆ, ಒಟ್ಟಾರೆ ಇದು ನನ್ನ ವಿಧಿ ಎಂದು ತನ್ನನ್ನು ತಾನೇ ಇಶಾಕ್ ಹಳಿದುಕೊಂಡಿರುವುದಾಗಿ ವರದಿ ತಿಳಿಸಿದೆ.