ಭಾರತದಲ್ಲಿ ಗೂಢಚಾರಿಕೆ ನಡೆಸುವ ಕುರಿತು ಪಾಕ್ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ತನಗೆ ವಿಶೇಷ ತರಬೇತಿ ನೀಡಿದ್ದಾಗಿ ಮುಂಬೈ ದಾಳಿ ಪ್ರಕರಣದ ಸಹ ಆರೋಪಿ ಡೇವಿಡ್ ಕೋಲ್ಮನ್ ಹೆಡ್ಲಿ ಹೇಳಿರುವುದರೊಂದಿಗೆ, ಭಾರತದಲ್ಲಿ ನಡೆಯುತ್ತಿರುವ ವಿಧ್ವಂಸಕ ಕೃತ್ಯಗಳಲ್ಲಿ ಐಎಸ್ಐ ಪಾತ್ರವಿದೆ ಎಂಬ ಆರೋಪಕ್ಕೆ ಮತ್ತಷ್ಟು ಪುರಾವೆ ದೊರೆತಂತಾಗಿದೆ.
26/11 ದಾಳಿ ಪ್ರಕರಣದ ಹಿನ್ನೆಲೆಯಲ್ಲಿ ಬಂಧಿತನಾಗಿ ಶಿಕಾಗೋ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿರುವ ಪಾಕ್ ಮೂಲದ ಕೆನಡಿಯನ್ ತಹಾವುರ್ ರಾಣಾ ವಿರುದ್ಧ ಸಾಕ್ಷಿದಾರನಾಗಿ ಪರಿವರ್ತನೆಗೊಂಡಿರುವ ಹೆಡ್ಲಿ ಮೂರನೇ ದಿನ ಕೋರ್ಟಿನಲ್ಲಿ ತನ್ನ ಹೇಳಿಕೆ ದಾಖಲಿಸಿದ್ದಾನೆ.
ಇದು ಮುಂಬೈ ದಾಳಿಯಲ್ಲಿ ಐಎಸ್‌ಐ ಭಾಗಿಯಾಗಿತ್ತು ಎಂದು ಭಾರತ ಮಾಡಿದ್ದ ಆಪಾದನೆಗೆ ಪುಷ್ಟಿ ನೀಡಿದೆ ಹಾಗೂ ಸರಕಾರಿ ವಕೀಲರು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ ದಾಖಲೆಗಳೂ ಇದನ್ನು ದೃಢೀಕರಿಸಿವೆ.
ವಿಮಾನ ನಿಲ್ದಾಣ ದಾಳಿಗೂ ನಿರ್ಧರಿಸಿದ್ದ ಮೇಜರ್ ಇಕ್ಬಾಲ್ ವಿಚಾರಣೆ ಸಂದರ್ಭದಲ್ಲಿ, 2008 ರಲ್ಲಿ ನಡೆದ ಮುಂಬೈ ದಾಳಿ ಕಾರ್ಯಾಚರಣೆಯಲ್ಲಿ ಮುಂಬೈ ಅಂತಾರಾಷ್ಟ್ರೀಯ ನಿಲ್ದಾಣವನ್ನೂ ಸೇರಿಸಲು, ತನಗೆ ಸೂಚನೆಗಳನ್ನು ನೀಡುತ್ತಿದ್ದ ಐಎಸ್‌ಐ ಅಧಿಕಾರಿ ಮೇಜರ್ ಇಕ್ಬಾಲ್ ಬಯಸಿದ್ದ ಎಂದು ಹೆಡ್ಲಿ ಹೇಳಿದ್ದಾನೆ.
ಮುಂಬೈ ದಾಳಿಗೆ ಐದು ತಿಂಗಳು ಮುನ್ನ, ಜೂನ್ 2008ರಂದು ಮೇಜರ್ ಇಕ್ಬಾಲ್‌ನನ್ನು ತಾನು ಭೇಟಿ ಮಾಡಿದಾಗ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ದಾಳಿಯ ಪಟ್ಟಿಯಲ್ಲಿ ಸೇರಿಸದೇ ಇರುವ ಬಗ್ಗೆ ಆತ ನಿರಾಶೆ ವ್ಯಕ್ತಪಡಿಸಿದ್ದ ಎಂದು ಹೆಡ್ಲಿ ತಿಳಿಸಿದ್ದಾನೆ.
ಇಕ್ಬಾಲ್‌ನನ್ನು ಭೇಟಿಯಾಗುವ ಮುನ್ನ ಲಷ್ಕರ್ ಮುಖಂಡ ಸಾಜಿದ್ ಮಿರ್‌ನನ್ನು ಹೆಡ್ಲಿ ಭೇಟಿಯಾಗಿದ್ದ. ದಾಳಿಗೆ ಗುರಿ ಮಾಡಿರುವ ಸ್ಥಳಗಳ ಪಟ್ಟಿಯನ್ನು ಆತ ಹೆಡ್ಲಿಗೆ ನೀಡಿದ್ದ. ಈ ಸಂದರ್ಭದಲ್ಲಿ ಮುಂಬೈನ ಚಾಬಾದ್ ಹೌಸನ್ನೂ ಪಟ್ಟಿಯಲ್ಲಿ ಸೇರಿಸಲಾಗಿತ್ತು.